Site icon Vistara News

Bike accident | ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಬೈಕ್: ಇಬ್ಬರು ಸಾವು, ಒಬ್ಬನ ಸ್ಥಿತಿ ಗಂಭೀರ

ಹಗರಿಬೊಮ್ಮನಹಳ್ಳಿ ಅಪಘಾತ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೇಕಲ್ ತಾಂಡ ಬಳಿ ಬೈಕೊಂದು ಕಮರಿಗೆ ಉರುಳಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆನೇಕಲ್‌ ತಾಂಡದ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್‌ ನೇರವಾಗಿ ಸಾಗಿ ಒಂದು ಗುಂಡಿಗೆ ಉರುಳಿದೆ. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಬೈಕ್‌ ಸವಾರ ಸುನಿಲ್‌ ನಾಯ್ಕ್‌ (೨೧), ಪೂಜಾ (೧೪) ಮೃತಪಟ್ಟಿದ್ದಾರೆ. ಆಕಾಶ್‌ ನಾಯ್ಕ್‌ ಎಂಬವರಿಗೆ ತೀವ್ರ ಗಾಯಗಳಾಗಿವೆ.

ಮೃತರಿಬ್ಬರೂ ಎಚ್‌.ಬಿ. ಹಳ್ಳಿಯ ಬಸುರುಕೋಡು ಗ್ರಾಮದವರು. ಗಾಯಾಳು ಆಕಾಶ್‌ ನಾಯ್ಕ್‌ನನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಜಯನಗರ ಎಸ್.ಪಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್‌ ಮತ್ತು ಮೃತಪಟ್ಟವರನ್ನು ಕಮರಿಯಿಂದ ಮೇಲೆತ್ತುವುದೇ ದೊಡ್ಡ ಸಾಹಸವಾಗಿದೆ.

ಅಪಘಾತ ನಡೆದ ಸ್ಥಳ

ಲಂಬಾಣಿ ಸಮುದಾಯಕ್ಕೆ ಸೇರಿದ ಕೃಷ್ಣ ನಾಯ್ಕ (೪೭) ಎಂಬವರ ಮಗಳು, ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಪೂಜಾಳಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಆಕೆಯನ್ನು ಹಗರಿಬೊಮ್ಮನಹಳ್ಳಿಯಲ್ಲಿ ಚಿಕಿತ್ಸೆಗೆಂದು ಕೃಷ್ಣ ನಾಯ್ಕರ ಪತ್ನಿ ಕರೆದುಕೊಂಡು ಹೋಗಿದ್ದರು. ಆಕೆಗೆ ಚಿಕಿತ್ಸೆ ಕೊಡಿಸಿದ ಬಳಿಕ ಆಕೆಯನ್ನು ಕೃಷ್ಣ ನಾಯ್ಕರ ಅಳಿಯನಾದ ಸುನಿಲ್‌ ನಾಯ್ಕ್‌ ಅವರ ಆನೇಕಲ್‌ನ ಮನೆಯಲ್ಲಿ ಬಿಟ್ಟು ಬರಲಾಗಿತ್ತು.

ಆದರೆ, ರಾತ್ರಿ ಹೊತ್ತಿಗೆ ಪೂಜಾಳಿಗೆ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದಾಗಿ ರಾತ್ರಿಯೇ ಕರೆದುಕೊಂಡು ಬರಲು ತಿಳಿಸಲಾಯಿತು. ಹಾಗಾಗಿ ರಾತ್ರಿ ೧.೩೦ರ ಹೊತ್ತಿಗೆ ಪೂಜಾ ಮತ್ತು ಪಕ್ಕದ ಮನೆಯ ಆಕಾಶ್‌ ನಾಯ್ಕ್‌ನನ್ನು ಕರೆದುಕೊಂಡು ಬೈಕ್‌ನಲ್ಲಿ ಸುನಿಲ್‌ ನಾಯ್ಕ್‌ನಲ್ಲಿ ಹೊರಟಿದ್ದರು. ಆದರೆ, ಅಪಘಾತ ಸಂಭವಿಸಿ ಇಬ್ಬರು ಪ್ರಾಣ ಕಳೆದುಕೊಂಡರು.

ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕೋಲಾರ: ನಗರದ ಕ್ಲಾಕ್‌ ಟವರ್‌ ಬ್ರಿಡ್ಜ್‌ ಮೇಲೆ ಸರ್ಕಾರಿ ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ. ವಡಗೂರು ಗ್ರಾಮದ ನಿವಾಸಿ ರಾಕೇಶ್ (28) ಮೃತ ವ್ಯಕ್ತಿ. ಅವರು ಸರ್ಕಾರಿ ಬಸ್‌ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Jeep Accident | ಸಿಎಂ ಬೆಂಗಾವಲು ವಾಹನ ಪಲ್ಟಿ, ದಾರಿಯಲ್ಲಿ ಹೋಗುತ್ತಿದ್ದ ತಾಯಿ-ಮಗನಿಗೆ ಗಾಯ; ಕಾಂಗ್ರೆಸ್‌ ಪ್ರತಿಭಟನೆ

Exit mobile version