ಬೆಂಗಳೂರು: ರಾಜಧಾನಿಯಲ್ಲಿ ನಿತ್ಯವೂ ಹತ್ತಾರು ಅಪಘಾತಗಳು (Road accident) ನಡೆದು ಜನರು ಪ್ರಾಣ ಕಳೆದುಕೊಳ್ಳುವುದು, ದೇಹದ ಅಂಗಾಂಗಗಳಿಗೆ ಊನವಾಗುವುದು ಸಾಮಾನ್ಯ ಎಂಬಂತಾಗಿದೆ. ಸೋಮವಾರ ರಾತ್ರಿ ಬಸವೇಶ್ವರ ನಗರದಲ್ಲಿ ಇಂಥಹುದೇ ಒಂದು ಘಟನೆ ನಡೆದು ಬೈಕ್ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ.
ಅವರಿಗೆ ಸುಮಾರು ೬೧ ವರ್ಷ. ಹೆಸರು ಬೊಗ್ಗರಾಮ್ ನಾಗರಾಜ್. ತಮ್ಮ ಪಾಡಿಗೆ ಬೈಕ್‌ನಲ್ಲಿ ಸಾಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಕಾರು ಒಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ರಸ್ತೆಯಿಂದ ಫುಟ್‌ಪಾತ್ ಮೇಲೆ ಹೋಗಿ ಬಿದ್ದಿದೆ.
ಫುಟ್‌ಪಾತ್ ಮೇಲೆ ಬಿದ್ದ ಸವಾರನ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತಲೆಗೆ ದೊಡ್ಡ ಪೆಟ್ಟೇ ಬಿದ್ದಿದ್ದರಿಂದ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ರಾತ್ರಿ ೯ ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದು, ವಿಜಯ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂಜೆ ಮಾಡಿಸಿಕೊಂಡು ಬರುತ್ತಿದ್ದರು
ನಿಜವೆಂದರೆ ಡಿಕ್ಕಿ ಹೊಡೆದ ಕಾರು ಹೊಚ್ಚಹೊಸದು. ಆಗಷ್ಟೆ ಖರೀದಿ ಮಾಡಿದ್ದ ಹೊಸ ಕಾರನ್ನು ಡೆಲಿವರಿ ತೆಗೆದುಕೊಂಡು ತಾವೇ ಪೂಜೆ ಮಾಡಿಸಿಕೊಂಡು ಬಂದಿದ್ದರು ಆ ದಂಪತಿ. ಪೂಜೆ ಮಾಡಿ ವಾಪಸಾಗುವಾಗ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಳ್ಳುವಾಗ ಘಟನೆ ನಡೆದಿದೆ.
ಬೈಕ್‌ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತ್ಯು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡರಾತ್ರಿ 12 ಗಂಟೆ ಸಮಯದಲ್ಲಿ ಅಪಘಾತವಾಗಿದೆ. ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ರವಿ (22) ಹಾಗು ಆತನ ಸ್ನೇಹಿತ ವಿಕಾಸ್(20) ಎಂದು ಗುರುತಿಸಲಾಗಿದೆ.
ಚನ್ನಂಪಲ್ಲಿ ಗ್ರಾಮದ ವಿಕಾಸ್ ಹಾಗೂ ರವಿ ಮಂಡ್ಯ ಮೂಲದವರಾಗಿದ್ದು, ಸುಂಕದಕಟ್ಟೆ ರಸ್ತೆಯ ಟ್ರೂ ವ್ಯಾಲ್ಯೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಡ್ಯೂಟಿ ಮುಗಿಸಿ ಕಂಪನಿ ಯೂನಿಫಾರಂ ತರಲು ಟೈಲರ್ ಶಾಪ್‌ಗೆ ಹೋಗಿದ್ದ ಇವರು ಬ್ಯಾಡರಹಳ್ಳಿ ಬಳಿಯಲ್ಲಿರುವ ಟೈಲರ್ ಶಾಪ್‌ಗೆ ಹೋಗಿ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ | ಬೈಕ್ ಸವಾರರ ಮೇಲೆ ಹರಿದ ಲಾರಿ, ಇಬ್ಬರು ಸಾವು