ಕೋಲಾರ: ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿಯಾಗಿ (Bike Accident) ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆಯ ಕುಪ್ಪನಹಳ್ಳಿ ಕ್ರಾಸ್ ಬಳಿ ನಡೆದಿದೆ. ಕೋಲಾರ ಹಾಗೂ ಬಂಗಾರಪೇಟೆ ಮಾರ್ಗದಲ್ಲಿ ಅಕ್ಕಿ ಸಾಗಿಸುತ್ತಿದ್ದ ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ನರಸಾಪುರ ನಿವಾಸಿ ಚಾಂದ್ ಪಾಷಾ (52) ಮೃತರು. ಅಕ್ಕಿ ಸಾಗಿಸುತ್ತಿದ್ದ ಕ್ಯಾಂಟರ್ ಬೈಕ್ ಡಿಕ್ಕಿಯಾಗಿದ್ದರಿಂದ ಗಂಭೀರವಾಗಿ ಗಾಯಗೊಂಡು ಸವಾರ ಮೃತಪಟ್ಟಿದ್ದಾರೆ. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ಕ್ಯಾಂಟರ್ ಉರುಳಿಬಿದ್ದಿದೆ. ಕ್ಯಾಂಟರ್ ಗುದ್ದಿದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ತಲೆ ಕೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ; ಸಲೂನ್ನಿಂದ ಬರುತ್ತಿದ್ದಂತೇ ಅತ್ತು, ರಂಪಾಟ ಮಾಡಿದ್ದ!
ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರಿಗೆ ಗಾಯ
ರಾಯಚೂರು: ಗ್ಯಾಸ್ ಸಿಲಿಂಡರ್ ಬದಲಿಸುವಾಗ ಸ್ಫೋಟವಾಗಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ನೇತಾಜಿ ಬಡಾವಣೆಯಲ್ಲಿ ನಡೆದಿದೆ. ಗುರುವಾರ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ. ಈ ವೇಳೆ ಸಿಲಿಂಡರ್ ಬದಲಿಸಲು ಮಹಿಳೆಯೊಬ್ಬರು ಮುಂದಾದಾಗ ಗ್ಯಾಸ್ ಸೋರಿಕೆಯಾಗಿ ಸ್ಫೋಟವಾಗಿದೆ.
ಶಂಷುದ್ದೀನ್ ಎಂಬುವವರ ಮನೆಯಲ್ಲಿ ಸ್ಫೋಟವಾಗಿದ್ದು, ಅಂಜುಮ್, ನಫೀಜಾ ಬಾನು, ಪದ್ಮಾವತಿ ಗಾಯಾಳುಗಳು. ಗ್ಯಾಸ್ ಸಿಲಿಂಡರ್ ಬದಲಿಸುವಾಗ ಸೇಫ್ಟಿ ವಾಲ್ವ್ ಇಲ್ಲದ ಕಾರಣ ಸಿಲಿಂಡರ್ ಸ್ಫೋಟವಾಗಿದೆ ಎನ್ನಲಾಗಿದೆ. ಶಂಷುದ್ದೀನ್ ಅವರ ಪತ್ನಿ ನಫೀಜಾ ಬಾನು ಸಿಲಿಂಡರ್ ಬದಲಿಸುವಾಗ ಅವಘಡ ನಡೆದಿದೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳ ಸಮೇತ ಮಹಿಳೆ ಹಾರಿ ಹೊರಗೆ ಬಿದ್ದಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಮನೆಯಲ್ಲಿದ್ದ ಇನ್ನಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ. ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Suicide Case: ಗಂಡ ಚಾಕೊಲೇಟ್ ತಂದು ಕೊಡಲಿಲ್ಲವೆಂದು ನೇಣಿಗೆ ಶರಣಾದಳು ಹೆಂಡತಿ!
ಸಿಲಿಂಡರ್ ಸ್ಫೋಟದಿಂದ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಅವಘಡ ನಡೆಯಲು ಗ್ಯಾಸ್ ಏಜೆನ್ಸಿಯವರ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ನೇತಾಜಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಉರುಳಿಬಿದ್ದ ಬೈಕ್; ರಸ್ತೆಗೆ ಬಿದ್ದ ಸವಾರರ ಮೇಲೆ ಏರಿದ ಲಾರಿ, ಇಬ್ಬರು ಯುವಕರು ದುರ್ಮರಣ
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನೆಮ್ಮಾರು ವ್ಯಾಪ್ತಿಯ ಕೆರೆ ಕಟ್ಟೆ ಗ್ರಾಮದ ಬಳಿ ಅಪಘಾತಗೊಂಡು ರಸ್ತೆಗೆ ಉರುಳಿಬಿದ್ದ ಇಬ್ಬರು ಯುವಕರ ಮೇಲೆ ಲಾರಿ ಹರಿದು ಇಬ್ಬರೂ ಪ್ರಾಣ (Road accident) ಕಳೆದುಕೊಂಡಿದ್ದಾರೆ. ಮೃತರು ಬಾಳೆಹೊನ್ನೂರು ಮೂಲದವರು ಎಂದು ಗುರುತಿಸಲಾಗಿದೆ.
ಈ ಯುವಕರಿಬ್ಬರು ಬೈಕ್‌ನಲ್ಲಿ ಸಾಗುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಆಗ ಅವರಿಬ್ಬರೂ ಬೈಕ್ ಸಮೇತ ರಸ್ತೆಗೆ ಉರುಳಿಬಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಬಿದ್ದ ಅವರ ಮೇಲೆಯೇ ಹರಿದಿದೆ. ಟಿಪ್ಪರ್ ಲಾರಿ ಅವರ ಮೇಲೆ ಹರಿದಿದ್ದರಿಂದ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿದ್ದು, ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.