ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangalore airport) ದುಬೈಗೆ ಹೊರಡಲು ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಟ್ಯಾಕ್ಸಿ ವೇ ದಾಟಿ ರನ್‌ವೇಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ (Indigo airlines) ವಿಮಾನ ಪ್ರಯಾಣಿಕರು ಹೊತ್ತು ಹೊರಟಿತ್ತು. ಬೆಳಗ್ಗೆ 8.30ರ ಹೊತ್ತಿಗೆ ಈ ವಿಮಾನ ಟ್ಯಾಕ್ಸಿ ವೇ ಮೂಲಕ ಸಾಗಿ ರನ್‌ವೇಯನ್ನು ಪ್ರವೇಶಿಸಿತ್ತು. ರನ್ ವೇಯಲ್ಲಿ ವೇಗವಾಗಿ ಸಾಗಿ ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಏಕಾಏಕಿಯಾಗಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ.
ಈ ರೀತಿ ಹಕ್ಕಿ ಡಿಕ್ಕಿ ಹೊಡೆದುದನ್ನು ತಿಳಿಯುತ್ತಿದ್ದಂತೆಯೇ ತಕ್ಷಣ ಅಪಾಯದ ಸೂಚನೆ ಅರಿತ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದರು. ಕೂಡಲೇ ಟೇಕಾಫ್‌ನ್ನು ಕ್ಯಾನ್ಸಲ್ ಮಾಡಿ ರನ್‌ವೇನಿಂದಲೇ ವಿಮಾನವನ್ನು ವಾಪಸ್ ಬರುವಂತೆ ಸೂಚಿಸಲಾಯಿತು.
ಇದೀಗ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ವಿಮಾನದ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಈ ಪ್ರಯಾಣಿಕರನ್ನು ದುಬೈಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಘಟನೆಯಿಂದಾಗಿ ಕೆಲ ಕಾಲ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಹಾದುರಂತ ಸಂಭವಿಸಿ 13 ವರ್ಷ
ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಮಹಾ ದುರಂತವೊಂದು ಸಂಭವಿಸಿ 158 ಮಂದಿ ಪ್ರಾಣ ಕಳೆದುಕೊಂಡಿದ್ದ ಘಟನೆಗೆ ಕಳೆದ ವಾರವಷ್ಟೇ 13 ವರ್ಷ ತುಂಬಿತ್ತು.
2010ರ ಮೇ 22ರಂದು ಬೆಳಗ್ಗೆ 6.05ಕ್ಕೆ ದುಬಾೖಯಿಂದ ಮಂಗಳೂರಿಗೆ ಬಂದು ಲ್ಯಾಂಡ್ ಆಗುವ ಹಂತದಲ್ಲಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿಯಂತ್ರಣ ಕಳೆದುಕೊಂಡು ರನ್ ವೇಯಿಂದ ಕೆಳಗೆ ಜಾರಿ ಕೆಂಜಾರಿನಲ್ಲಿ ಪತನಗೊಂಡಿತ್ತು. ದುರಂತದಲ್ಲಿ 158 ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಮೃತಪಟ್ಟಿದ್ದರು. ಕೇವಲ ಎಂಟು ಮಂದಿ ಮಾತ್ರ ಅದೃಷ್ಟವಶಾತ್ ಬದುಕಿದ್ದರು. ಇವತ್ತಿಗೂ ಈ ಘಟನೆ ಆತಂಕಕಾರಿಯಾಗಿ ಕಾಡುತ್ತಿದೆ.
ಘಟನೆಯ ಬಳಿಕ ವಿಮಾನ ನಿಲ್ದಾಣಕ್ಕೆ ಕೆಂಜಾರಿನಲ್ಲಿ ಹೊಸ ಟರ್ಮಿನಲ್ ಮಾಡಲಾಗಿದ್ದು, ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: dk shivakumar : ಹೆಲಿಕಾಪ್ಟರ್ ಅಪಘಾತ; ಡಿ ಕೆ ಶಿವಕುಮಾರ್ ಸ್ವಲ್ಪದರಲ್ಲಿಯೇ ಪಾರು