Site icon Vistara News

Voter data | ಕಾಂಗ್ರೆಸ್‌ನಿಂದ ಗಿಫ್ಟ್‌ ಆಮಿಷ ಒಡ್ಡಿ ವೋಟರ್‌ ಐಡಿ ಸಂಗ್ರಹ: ಬಿಜೆಪಿ ಆರೋಪ, ಆರ್‌ ಆರ್‌ ನಗರದಲ್ಲಿ ಮೆಗಾ ಫೈಟ್‌

ಆರ್‌ ಆರ್‌ ನಗರ ಪ್ರತಿಭಟನೆ

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿಯಲ್ಲಿರುವ ಮತದಾರರ ಮಾಹಿತಿ ಸಂಗ್ರಹ ಮತ್ತು ಕಳವು ಆರೋಪ (Voter data) ಈಗ ಬಿಜೆಪಿಯಿಂದ ಕಾಂಗ್ರೆಸ್‌ ಕಡೆಗೆ ತಿರುಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚಾಣಕ್ಯ ವಾರ್ಡ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮತದಾರರಿಗೆ ಆಮಿಷವನ್ನೂ ಒಡ್ಡಲಾಗುತ್ತಿದೆ ಎಂಬ ಆರೋಪವೂ ಇದೆ. ಆದರೆ, ಕಾಂಗ್ರೆಸ್‌ ಮಾತ್ರ ಇದು ಮತದಾನ ಜಾಗೃತಿ ಎಂದು ಹೇಳಿಕೊಂಡಿದೆ.

ತೋಟಗಾರಿಕಾ ಸಚಿವ ಮುನಿರತ್ನ ಅವರು ಪ್ರತಿನಿಧಿಸುತ್ತಿರುವ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬರುವ ಚಾಣಕ್ಯ ವಾರ್ಡ್‌ನಲ್ಲಿ ಕೆಲವರು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಪಡೆಯುತ್ತಿದ್ದರು. ಇದನ್ನು ಬಿಜೆಪಿ ಆಕ್ಷೇಪಿಸಿದ್ದು, ವೋಟರ್‌ ಐಡಿ ಪಡೆದುಕೊಳ್ಳುತ್ತಿರುವಾಗಲೇ ಬಿಜೆಪಿ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮನೆ ಮನೆಗೆ ಹೋಗಿ ಮಾಹಿತಿ ಪಡೆಯುತ್ತಿರುವ ವ್ಯಕ್ತಿ

ಮನೆಯೊಂದಕ್ಕೆ ಹೋಗಿ ವೋಟರ್ ಐಡಿ ಪಡೆದುಕೊಳ್ಳುತ್ತಿರುವಾಗಲೇ ಬಿಜೆಪಿ ಕಾರ್ಯಕರ್ತರು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜತೆಗೆ ಶ್ಯಾಮ್ ಹಾಗೂ ರಘು ಎಂಬುವವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಗಿಫ್ಟ್‌ ನೀಡುವ ಆಮಿಷ ಒಡ್ಡಿ ವೋಟರ್‌ ಐಡಿಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಮಾಹಿತಿ ಪುಸ್ತಕದಲ್ಲಿ ಕುಸುಮಾ ಮತ್ತು ಡಿ.ಕೆ. ಸುರೇಶ್‌ ಫೋಟೊ
ಈ ನಡುವೆ ಶ್ಯಾಮ್‌ ಮತ್ತು ರಘು ಅವರು ಹಿಡಿದುಕೊಂಡು ಬಂದಿದ್ದ ಮಾಹಿತಿ ಪುಸ್ತಕದಲ್ಲಿ ಆರ್‌ಆರ್‌ ನಗರ ಕ್ಷೇತ್ರದ ಕಳೆದ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರ ಭಾವಚಿತ್ರಗಳಿರುವುದು ಇದು ಕಾಂಗ್ರೆಸ್‌ನಿಂದ ನಡೆಯುತ್ತಿರುವ ಮಾಹಿತಿ ಕಳವು ಎಂಬ ಆಪಾದನೆಗೆ ಕಾರಣವಾಗಿದೆ. ಸ್ಥಳೀಯರು ಮತ್ತು ಮಾಜಿ ಕಾರ್ಪೊರೇಟರ್‌, ಬಿಜೆಪಿಯ ವೆಂಕಟೇಶ್‌ ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರಿಗೆ ಒಪ್ಪಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದರು. ಯಶವಂತಪುರ ಬಿ.ಕೆ.ನಗರ 8ನೇ ಕ್ರಾಸ್‌ನ ಮನೆಯಲ್ಲಿ ಸರ್ವೆ ಮಾಡುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.

ಬಿಜೆಪಿ ಮುಖಂಡ ವೆಂಕಟೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ನ ಮಾಹಿತಿ ಸಂಗ್ರಹವನ್ನು ತಡೆಯುತ್ತಿರುವುದು.

ಠಾಣೆಗೆ ಧಾವಿಸಿದ ಬಂದ ಕಾಂಗ್ರೆಸ್‌ ನಾಯಕಿ ಕುಸುಮಾ
ಈ ನಡುವೆ, ರಘು ಮತ್ತು ಶ್ಯಾಮ್‌ ಎಂಬವರನ್ನು ಬಿಜೆಪಿ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ ಅವರನ್ನು ಠಾಣೆಗೆ ಕರೆ ತರುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕಿ ಕುಸುಮಾ ಮತ್ತು ಅವರ ತಂದೆ ಹನುಮಂತೇ ಗೌಡ ಠಾಣೆಗೆ ಧಾವಿಸಿದರು. ಅವರು ಬರುವ ಹೊತ್ತಿಗೆ ಬಿಜೆಪಿ ಕಾರ್ಯಕರ್ತರು ಜೋರಾಗಿ ಕಾಂಗ್ರೆಸ್‌ ವಿರುದ್ಧ ಧಿಕ್ಕಾರ ಕೂಗಿದರು.

ಯಾವ ವಾರ್ಡ್‌ನ ವೋಟರ್‌ ಲಿಸ್ಟ್‌ ಇದು?
ವಿಶೇಷವೆಂದರೆ ಕಾಂಗ್ರೆಸ್‌ನ ಪರವಾಗಿ ಬಂದಿದ್ದಾರೆ ಎನ್ನಲಾದ ರಘು ಮತ್ತು ಶ್ಯಾಮ್‌ ಅವರ ಕೈಯಲ್ಲಿದ್ದುದು ಚಾಣಕ್ಯ ಎಂದು ನಾಮಕರಣ ಮಾಡಿರುವ ಹೊಸ ವಾರ್ಡ್‌ನ ವೋಟರ್ ಲಿಸ್ಟ್ ಎಂದು ಹೇಳಲಾಗಿದೆ. ನಿಜವೆಂದರೆ, ಈ ವೋಟರ್‌ ಲಿಸ್ಟ್‌ ಬಿಬಿಎಂಪಿ ಬಳಿಯೇ ಇಲ್ಲ. ಬಿಬಿಎಂಪಿ ಬಳಿಯಲ್ಲೇ ಇಲ್ಲದ ಈ ವೋಟರ್‌ ಲಿಸ್ಟ್‌ ಕಾಂಗ್ರೆಸ್‌ನವರಿಗೆ ಹೇಗೆ ಸಿಕ್ಕಿತು ಎಂದು ಮಾಜಿ ಕಾರ್ಪೊರೇಟರ್‌ ವೆಂಕಟೇಶ್‌ ಪ್ರಶ್ನೆ ಮಾಡಿದ್ದಾರೆ.

1187 ವೋಟರ್ ಐಡಿ ಲಿಸ್ಟ್ ಬುಕ್ ಪತ್ತೆಯಾಗಿದೆ ಎಂದಿರುವ ಬಿಜೆಪಿ ನಾಯಕರು ಇದರ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವಕರ ವಿಚಾರಣೆ ನಡೆಯುತ್ತಿದೆ.

ಕಾಂಗ್ರೆಸ್‌ ನೀಡುವ ವಿವರಣೆ ಬೇರೆಯೇ ಇದೆ
ಈ ನಡುವೆ ಮತದಾರರ ಮಾಹಿತಿ ಸಂಗ್ರಹ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಬೇರೆಯೇ ವಿವರಣೆ ನೀಡುತ್ತಿದ್ದಾರೆ. ಚಿಲುಮೆ ಸಂಸ್ಥೆಯ ಅಕ್ರಮದ ಬಳಿಕ ಮತದಾರರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂಬ ಬಗ್ಗೆ ಸೂಚನೆ ಬಂದಿದೆ. ಹೀಗಾಗಿ ಈ ಪ್ರಕ್ರಿಯೆ ನಡೆದಿದೆ.

ಡಿ.ಕೆ. ಸುರೇಶ್‌ ಪೊಲೀಸರಿಗೆ ಬರೆದ ಪತ್ರ

ʻʻಯಾರು ಯಾರ ಹೆಸರು ಡಿಲೀಟ್‌ ಆಗಿದೆ. ಯಾರ ಹೆಸರನ್ನು ಯಾರ ವಾರ್ಡ್‌ನಲ್ಲಿ ಸೇರಿಸಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸುವಂತೆ ಪಕ್ಷದಿಂದ ಅಧಿಕೃತ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಮತದಾರರ ಮಾಹಿತಿ ಕಲೆ ಹಾಕಲಾಗಿದೆʼʼ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಅದರಲ್ಲೂ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಿಂದ ಅನುಮತಿ ಕೂಡ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಸಂಸದ ಡಿ.ಕೆ.ಸುರೇಶ್ ಪತ್ರದ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನುತ್ತಿರುವ ಕೈ ಮುಖಂಡರು ಅದಕ್ಕೆ ಸಂಬಂಧಿಸಿದ ದಾಖಲೆಯನ್ನೂ ತೋರಿಸುತ್ತಿದ್ದಾರೆ.

ಇದನ್ನೂ ಓದಿ | Voter Data | ಹುಬ್ಬಳ್ಳಿಯಲ್ಲಿ ಆ್ಯಪ್ ಮೂಲಕ ಸರ್ವೇ ನಡೆಸಿ ಮತದಾರರ ಮಾಹಿತಿ ಪಡೆಯುತ್ತಿದ್ದ ಮೂವರ ಸೆರೆ

Exit mobile version