Site icon Vistara News

ಬಿಜೆಪಿ ಜನೋತ್ಸವ ದಿನಾಂಕ ಮತ್ತೆ ಬದಲು, ಭಾನುವಾರ ಅಲ್ಲ ಶನಿವಾರವೇ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ

BJP and Gujarat Election

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಸೆ.8ರ ಬದಲು ಸೆ.11ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದ ಬಿಜೆಪಿಯು ಈಗ ಮತ್ತೆ ದಿನಾಂಕ ಬದಲಾಯಿಸಿದೆ. ಸೆ.11ರ ಭಾನುವಾರದ ಬದಲು ಸೆ.10ರ ಶನಿವಾರವೇ ಆಯೋಜಿಸಲು ತೀರ್ಮಾನಿಸಿದೆ.

ಹಾಗೆಯೇ, ಜನೋತ್ಸವದ ಬದಲಾಗಿ “ಜನಸ್ಪಂದನ” ಹೆಸರಿನಲ್ಲಿ ಸಮಾವೇಶ ಆಯೋಜಿಸಲು ನಿರ್ಧರಿಸಿದೆ. ಭಾನುವಾರ ಜನೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಶನಿವಾರ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

“ಶನಿವಾರ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ. “ಜನಸ್ಪಂದನ (ಜನೋತ್ಸವ)- ಸಾರ್ಥಕ ಸೇವೆ ಹಾಗೂ ಸಬಲೀಕರಣ” ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ” ಎಂದು ಸುಧಾಕರ್‌ ತಿಳಿಸಿದ್ದಾರೆ.. ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಎರಡು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಆಡಳಿತ ಸೇರಿ ಬಿಜೆಪಿಯು ರಾಜ್ಯದಲ್ಲಿ ಮೂರು ವರ್ಷ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲು ಪಕ್ಷ ತೀರ್ಮಾನಿಸಿದೆ.

ಇದರೊಂದಿಗೆ ಬಿಜೆಪಿ ಕಾರ್ಯಕ್ರಮದ ದಿನಾಂಕವನ್ನು ನಾಲ್ಕನೇ ಬಾರಿ ಬದಲಾಯಿಸಿದಂತಾಗಿದೆ. ಮೊದಲಿಗೆ ಜುಲೈ 28ರಂದು ಆಯೋಜಿಸಲು ತೀರ್ಮಾನಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯಿಂದಾಗಿ ರದ್ದುಗೊಳಿಸಲಾಗಿತ್ತು. ಇದಾದ ನಂತರ ಆಗಸ್ಟ್‌ 28ಕ್ಕೆ ಮುಂದೂಡಲಾಯಿತಾದರೂ ಗಣೇಶ ಚತುರ್ಥಿ ಸೇರಿ ಹಲವು ಕಾರಣಗಳಿಂದಾಗಿ ಸೆ.8ಕ್ಕೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಸಚಿವ ಉಮೇಶ್‌ ಕತ್ತಿ ಅವರ ನಿಧನದಿಂದಾಗಿ ಸೆ.11ರಂದು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದರು. ಆದರೀಗ ಮತ್ತೆ ದಿನಾಂಕವನ್ನು ಬದಲಾಯಿಸಿದೆ.

ಸಹಕರಿಸುವಂತೆ ಕಾರ್ಯಕರ್ತರಿಗೆ ನಳಿನ್‌ ಕುಮಾರ್‌ ಕಟೀಲ್‌ ಮನವಿ
ಮಾನ್ಯ ಸಚಿವರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ‌3 ದಿನ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇದರಿಂದಾಗಿ ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನಸ್ಪಂದನಾ ಸಮಾವೇಶವನ್ನು ಸೆಪ್ಟೆಂಬರ್ 10 ಶನಿವಾರಕ್ಕೆ ಮುಂದೂಡಲಾಗಿದೆ. ಕಾರ್ಯಕರ್ತ ಬಂಧುಗಳು ಸಹಕರಿಸಬೇಕಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಗೊಂದಲದಲ್ಲಿ ಜನೋತ್ಸವ: 3ನೇ ಬಾರಿ ಮುಂದೂಡಿಕೆ ಸಾಧ್ಯತೆ ಕಡಿಮೆ, ಕತ್ತಿ ಸಾವಿನಿಂದಾಗಿ ಬೇಡ ಅಂತಿರುವ ಶಾಸಕರು

Exit mobile version