Site icon Vistara News

Belagavi Winter Session: ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

Belagavi Winter Session

ಬೆಳಗಾವಿ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ 7ನೇ ವೇತನ ಆಯೋಗದ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು, ಸಭಾತ್ಯಾಗ (Belagavi Winter Session) ಮಾಡಿದ ಘಟನೆ ಮಂಗಳವಾರ ನಡೆಯಿತು. ವರದಿ ಜಾರಿ ಸಂಬಂಧ ಸಭಾನಾಯಕ ಎನ್‌.ಎಸ್‌. ಭೋಸರಾಜು ನೀಡಿದ ಉತ್ತರ ತೃಪ್ತಿಕರವಾಗಿಲ್ಲ, ಸಿಎಂ ಸಿದ್ದರಾಮಯ್ಯನವರೇ ಬಂದು ಉತ್ತರಿಸಬೇಕು ಎಂದು ಪಟ್ಟು ಹಿಡಿದ ಸದಸ್ಯರು, ಬಳಿಕ ಸಭಾತ್ಯಾಗ ಮಾಡಿದರು.

ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ‘ಆಯೋಗದ ವರದಿ ಸಿದ್ಧವಾಗಿದ್ದರೂ, ವಿನಾ ಕಾರಣ ಆಯೋಗದ ಅವಧಿ ವಿಸ್ತರಿಸಲಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ. ವೇತನ ಪರಿಷ್ಕರಿಸಲು ಮನಸ್ಸಿಲ್ಲ’ ಎಂದು ಆರೋಪಿಸಿದರು. ಅವರ ಮಾತುಗಳಿಗೆ ಬಿಜೆಪಿ, ಜೆಡಿಎಸ್ ಸದಸ್ಯರು ದನಿಗೂಡಿಸಿದರು.

ಈ ವೇಳೆ ಉತ್ತರ ನೀಡಿದ ಎನ್.ಎಸ್. ಬೋಸರಾಜು ಅವರು, ‘ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿದೆ. ಆದಷ್ಟು ಬೇಗ ವರದಿ ಪಡೆದು ಸಾಧಕ- ಬಾಧಕಗಳನ್ನು ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು, ಸಭಾಪತಿ ಪೀಠದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ‘ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಮೋಸ ಮಾಡುತ್ತಿದೆ’ ಎಂದು ಘೋಷಣೆ ಕೂಗಿದರು. ಬಿಜೆಪಿಯ ಎಸ್.ವಿ. ಸಂಕನೂರ, ಚಿದಾನಂದಗೌಡ, ತೇಜಸ್ವಿನಿಗೌಡ, ಶಶಿಲ್ ಜಿ. ನಮೋಶಿ, ಜೆಡಿಎಸ್‌ನ ಎಸ್.ಎಲ್. ಬೋಜೇಗೌಡ ದನಿಗೂಡಿಸಿದರು. ನಂತರ ಅವರು ಸಭಾತ್ಯಾಗ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಅವರು, ‘ವೇತನ ಪರಿಷ್ಕರಣೆ ಬಗ್ಗೆ ಒಂದು ವಾರಗಳ ಕಾಲ ಸುದೀರ್ಘ ಚರ್ಚೆ ಆಗಬೇಕು’ ಎಂದು ಸಲಹೆ ನೀಡಿದರು.

ಇದನ್ನೂ ಓದಿ | HD Kumaraswamy: ವೈಯಕ್ತಿಕವಾಗಿ ಕೆಣಕಿದರೆ ನಾನು ಸುಮ್ಮನಿರಲ್ಲ ಎಂದ ಎಚ್‌ಡಿಕೆ

ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

ಬೆಳಗಾವಿ: ರಾಜ್ಯದಲ್ಲಿ ಭೀಕರ ಬರಗಾಲ (Karnataka Drought) ಇದೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನೂ ಸೇರಿಸಿ ಯಾವೊಬ್ಬ ಸಚಿವರೂ ಸಹ ರೈತರನ್ನು ಭೇಟಿ ಮಾಡುವ ಕೆಲಸ ಮಾಡಲಿಲ್ಲ. ಸಿಎಂ ಮತ್ತು ಸಚಿವರು ಎಲ್ಲ ಕಡೆ ಹೋಗಲು ಸಾಧ್ಯವಿಲ್ಲ ಎಂಬುದು ನಮಗೂ ಗೊತ್ತು. ಆದರೆ, ಕೆಲವು ಕಡೆಯಾದರೂ ಹೋಗಬೇಕಲ್ಲವೇ? ನೋಡಲ್ ಅಧಿಕಾರಿ ವಿಮಾನದಲ್ಲಿ ಹೋಗಿ ಮೀಟಿಂಗ್ ಮಾಡಿ ವಾಪಸ್ ಬರುತ್ತಾರೆ. ಕೊನೆಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ಕೊಡುತ್ತಾರೆ. ಸಿದ್ದರಾಮಯ್ಯ ಸಿದ್ದರಾಮಣ್ಣ ಮತ್ತು ನಮ್ಮ ಊರಲ್ಲೂ ಅದೇ ಕುರುಕ್ಷೇತ್ರ. ಇನ್ನು ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಕೊಡುತ್ತಿಲ್ಲ. ಟಿಸಿ ಹಾಳಾದರೆ ಅದನ್ನು ಬದಲಾವಣೆ ಮಾಡಲು, ರಿಪೇರಿ ಮಾಡಲು ಹಣ ಕೇಳುತ್ತಾರೆ. ಇದೆಂಥ ಪರಿಸ್ಥಿತಿ ಬಂದಿದೆ ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ (Opposition leader R Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಬರದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌, ಬರ ಪರಿಸ್ಥಿತಿ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಕುಳಿತಲ್ಲೇ ವರದಿ ತಯಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?

ಯಾವುದಾದರೂ ತಹಸೀಲ್ದಾರ್ ಎಷ್ಟು ಊರಿಗೆ ಹೋಗಿರುವುದಾಗಿ ಹೇಳಿದ್ದಾರೆ ಎಂಬುದನ್ನು ಯಾರಾದರೂ ಹೇಳಿ ನೋಡೋಣ? ಗ್ರಾಮ ಪಂಚಾಯಿತಿಯಲ್ಲಿ ಕುಳಿತುಕೊಂಡು ಅಧಿಕಾರಿಗಳಿಗೆ ಏನು ಕೆಲಸ? ಬೆಳೆ ಎಷ್ಟು ನಷ್ಟ ಆಗಿದೆ ಅಂತ ನೋಡಿ ಹೇಳಬೇಕಲ್ಲವೇ? ಎಂದು ಆರ್.‌ ಅಶೋಕ್‌ ಪ್ರಶ್ನೆ ಮಾಡಿದರು.

ಇದನ್ನೂ ಓದಿ | Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

ಸಿದ್ದರಾಮಯ್ಯ ಸಿಎಂ ಆಗಿ ಮುಂದೆ ಇರ್ತಾರೋ ಇಲ್ಲವೋ ಗೊತ್ತಿಲ್ಲ!

ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದ್ದಾರೆ. 2 ಬಾರಿ ಸಿಎಂ ಆಗಿದ್ದಾರೆ. 14 ಬಾರಿ ಅಲ್ವಾ ಒಂದು ಹೆಚ್ಚಾಗಿ ಹೇಳಿದ್ದೇನೆ. ಮುಂದೆಯೂ ನೀವೇ ಇರುತ್ತೀರಿ ಎಂದು ಹೇಳಿದ್ದೇನೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಮಂಡ್ಯ ಎಂಎಲ್‌ಎ ರವಿ ಗಣಿಗ ಅವರು ಮಂಡ್ಯದಲ್ಲಿ 2 ವರ್ಷ, 3 ವರ್ಷ ಆದ ಮೇಲೆ ಯಾರನ್ನೋ ತರುತ್ತೇವೆ ಎಂದು ಹೇಳಿದ್ದರು ಎಂಬುದಾಗಿ ಆರ್.‌ ಅಶೋಕ್‌ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆಯುತ್ತಿದ್ದಂತೆ ಎದ್ದುನಿಂತ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ, ನಿಮ್ಮ ಪಕ್ಷದ ಶಾಸಕರೊಬ್ಬರು ಮುಂದಿನ 10 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಅಂತ ಹೇಳಿದ್ದಾರೆ ಎಂದು ನೆನಪಿಸಿದರು. ಅದಕ್ಕೆ ಆರ್.‌ ಅಶೋಕ್‌, ಆಯ್ತು ಅಂತ ಹೇಳಿ ಸುಮ್ಮನಾದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version