Site icon Vistara News

Karnataka Drought: ಬಿಜೆಪಿ ಬರ ಅಧ್ಯಯನ ಶುರು; ಮಡುಗಟ್ಟಿದ ರೈತರ ಆಕ್ರೋಶ

BJP Drought study team

ವಿಜಯಪುರ/ಗದಗ: ರಾಜ್ಯದಲ್ಲಿ ಬಿಜೆಪಿಯಿಂದ ಬರ ಅಧ್ಯಯನ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಬಿ. ಶ್ರೀರಾಮಲು ನೇತೃತ್ವದ ಪ್ರತ್ಯೇಕ ತಂಡಗಳಿಂದ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಲ್ಲಿ ಶನಿವಾರ ಬರ ಸ್ಥಿತಿ ಅಧ್ಯಯನ (Karnataka Drought) ಮಾಡಲಾಯಿತು. ಈ ವೇಳೆ ಮಳೆ, ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಈವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ‌ಕುಮಾರ್‌ ಕಟೀಲ್‌ ನೇತೃತ್ವದ ತಂಡ ಬರ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ನಳಿನ್ ‌ಕುಮಾರ್‌ ಕಟೀಲ್‌ ಅವರು, ಬರದ ವಿಚಾರದಲ್ಲಿ ರಾಜ್ಯದ ಸಂಸದರು ಪ್ರಧಾನಿಗಳ ಭೇಟಿಗೆ ಸಮಯ ನಿಗದಿ ಮಾಡಿಸಲಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರಿಗೆ ಆಡಳಿತ ನಡೆಸಲು ಬರುವುದಿಲ್ಲ. ಎರಡೆರೆಡು ಬಾರಿ ಮುಖ್ಯಮಂತ್ರಿ, ಹಣಕಾಸು ಸಚಿವರಾದರೂ ಆಡಳಿತ ನಡೆಸಲು ಬರಲ್ಲ ಎಂದು ಕಿಡಿಕಾರಿದರು.

ಎನ್‌ಡಿಆರ್‌ಎಫ್‌ ಹಣ ಬಿಡುಗಡೆಗೆ ಅದರದ್ದೆ ಆದ ಮಾರ್ಗಸೂಚಿ ಇವೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ ಬಂದಿತ್ತು, ಅವರು ಕೇಂದ್ರ ಹಣಕಾಸಿಗೆ ಕಾಯಲಿಲ್ಲ, ತಕ್ಷಣ ಮನೆಗಳಿಗೆ ಹೋಗಿ 5 ಲಕ್ಷ ಪರಿಹಾರ ಕೊಟ್ಟರು. ಈಗ ಬರ ವಿಚಾರದಲ್ಲಿ ಮಾರ್ಗಸೂಚಿ ಪ್ರಕಾರ ಕೇಂದ್ರದಿಂದ ಹಣ ಬಂದೆ ಬರುತ್ತೆ. ಸದ್ಯ ತಕ್ಷಣ ಪರಿಹಾರ ಕೊಡಬೇಕಾಗಿರುವುದು ಸಿದ್ದರಾಮಣ್ಣನ ಜವಾಬ್ದಾರಿ. ಜಿಲ್ಲಾಧಿಕಾರಿಗಳ ಬಳಿ ಇರುವ ಎನ್‌ಡಿಆರ್‌ಎಫ್‌ ಹಣವನ್ನೇ ಬಿಡುಗಡೆ ಮಾಡಲಿ ಸಾಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Karnataka Politics: ರಾಜ್ಯ ಸರ್ಕಾರ ಅತಿ ಶೀಘ್ರದಲ್ಲೇ ಪತನವಾಗಲಿದೆ: ಕೆ.ಎಸ್‌. ಈಶ್ವರಪ್ಪ

ಸಿದ್ದರಾಮಯ್ಯ ಬ್ರೇಕ್ ಪಾಸ್ಟ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರ ವಿಚಾರದಲ್ಲಿ ಸಿಎಂ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ಕೇವಲ 5 ತಿಂಗಳಲ್ಲೇ 250 ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರದಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ನೀಡಿಲ್ಲ. ಬರದಿಂದ ರೈತ ಕಂಗೆಟ್ಟಿದ್ದಾನೆ. ಸಿಎಂಗೆ ಇದರ ಯೋಚನೆ ಇಲ್ಲ, ಈ ಬಗ್ಗೆ ತಲೆಕೆಡಿಕೊಂಡಿಲ್ಲ. ಆದರೆ, ಬ್ರೇಕ್ ಫಾಸ್ಟ್, ಬೇರೆ ಫಾಸ್ಟ್ ಎಲ್ಲಾ ಮಾಡುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ರಕ್ಷಣೆ ಮಾಡಿದರೆ ಸಿಎಂ ಸೀಟ್ ಉಳಿಯುತ್ತದೆ, ಕಡೆಗಣಿಸಿದರೆ ಇವರ ಸೀಟ್ ಉಳಿಯುವುದಿಲ್ಲ ಎಂದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬರದ ನಡುವೆ ಅವರಿಗೆ ರಾಜ್ಯದ ರೈತರ ಹಿತರಕ್ಷಣೆ ಮುಖ್ಯವಲ್ಲ. ಖುರ್ಚಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಖುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ರೈತರ ರಕ್ಷಣೆ ಹೇಗೆ ಮಾಡುವುದು ಎನ್ನುವ ಯೋಚನೆಯಲ್ಲಿ ಕಾಂಗ್ರೆಸ್ ಹಾಗೂ ಸಿಎಂ ಇಲ್ಲ ಎಂದು ಕಿಡಿ ಕಾರಿದರು.

ಬರದ ನಡುವೆ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಡಾನ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರದ ಸಮಯದಲ್ಲಿ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬರಬೇಕಿತ್ತು. ಸಿದ್ದರಾಮಯ್ಯ ಅಧಿಕಾರದ ಅಹಂಕಾರದಲ್ಲಿ ಮೆರೆಯುತ್ತಿದ್ದಾರೆ. ಅಧಿಕಾರದ ದರ್ಪದಲ್ಲಿ ನಡೆಯುತ್ತಿದ್ದಾರೆ. ಜನರ ಸಮಸ್ಯೆ ಅರಿತುಕೊಳ್ಳುವುದಲ್ಲಿ ವಿಫಲರಾಗಿದ್ದಾರೆ. ಸಿಎಂ ನೃತ್ಯ ಮಾಡಿದ್ದಾರೆಂದರೆ ಅವರಿಗೆ ರಾಜ್ಯದ ಜನರ ಸಮಸ್ಯೆಯ ಅರಿವಿಲ್ಲ. ಸಿದ್ದರಾಮಯ್ಯ ಅಧಿಕಾರ ನಡೆಸಬೇಕು ಅಂತ ಭಗವಂತನಿಗೆ ಇಚ್ಛೆ ಇಲ್ಲ‌. ಅವರು ಅಧಿಕಾರಕ್ಕೆ ಬಂದಾಗ ಬರಗಾಲ. ಅವರು ಭಗವಂತನ ಆಶೀರ್ವಾದದಿಂದ ಸಿಎಂ ಆಗಿಲ್ಲ. ಗ್ಯಾರಂಟಿ ಕಾರ್ಡ್ ಆಶೀರ್ವಾದದ ಸಿಎಂ ಆಗಿದ್ದಾರೆ ಎಂದು ಕಿಡಿಕಾರಿದರು.

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಜಾಲಗೇರಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್‌ ಸೇರಿ ವಿವಿಧೆಡೆ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದ ತಂಡ ಬರ ಪರಿಶೀಲನೆ ನಡೆಸಿತು.

ಪರಿಹಾರ ನೀಡದಿದ್ದರೆ ಮನೆಗೊಂದು ಹೆಣ ಬಿಳುತ್ತದೆ; ಸರ್ಕಾರದ ವಿರುದ್ಧ ಆಕ್ರೋಶ

BJP conducts drought study

ಗದಗ: ಜಿಲ್ಲೆಯ ನಾಗಾವಿ ಹಾಗೂ ಶಿರಹಟ್ಟಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬರ ಅಧ್ಯಯನ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಪರಿಹಾರ ನೀಡದಿದ್ದರೆ ಮನೆಗೊಂದು ಹೆಣ ಬಿಳುತ್ತದೆ ಎಂದು ಬರ ಅಧ್ಯಯನ ತಂಡದ ಎದುರು ರೈತರು ಗೋಳು ತೋಡಿಕೊಂಡರು. ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರದಿಂದ ಇನ್ನೂ ಯಾವುದೇ ಪರಿಹಾರ ನೀಡಿಲ್ಲ.. ಬಿಟ್ಟಿ ಭಾಗ್ಯಗಳಿಂದ ನಮಗೇನೂ‌ ಅನುಕೂಲವಾಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.

ಹೊಲದಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಮಹಿಳಾ ಕೂಲಿ ಕಾರ್ಮಿಕರನ್ನು ಕೃಷಿ ಕೆಲಸಕ್ಕೆ ಕರೆದರೆ ದೇವಸ್ಥಾನಕ್ಕೆ ಹೋಗುತ್ತೀವಿ ಎನ್ನುತ್ತಾರೆ. ಹೀಗಾಗಿ ಅನ್ನದಾತರು ಬಹಳ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ತಂಡದ ಮುಂದೆ ರೈತರು ಅಳಲು ತೊಡಿಕೊಂಡರು.

ಜನ್ರ ಸಂಕಷ್ಟ ಕೇಳಬೇಕಾದ ಸಿಎಂ ಈ ರೀತಿ ಕುಣಿದ್ರೆ ಹೇಗೆ ಎಂದ ಶ್ರೀರಾಮುಲು

ಗದಗನಲ್ಲಿ ಮಾಜಿ ಸಚಿವ ಬಿ. ಶ್ರೀರಾಮಲು ಮಾತನಾಡಿ, ರಾಜ್ಯದಲ್ಲಿ ಭೀಕರ ಬರ ತಾಂಡವಾಡುತ್ತಿದೆ. ರೈತರು, ಜನರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯದ ಸಿಎಂ ಹಂಪಿಯಲ್ಲಿ ಖುಷಿಯಿಂದ ಡಾನ್ಸ್ ಮಾಡುತ್ತಾರೆ. ಬರಗಾಲದ ಸಂಕಷ್ಟದಲ್ಲಿ ರೈತರು ಇದ್ದರೆ, ಸಿಎಂ ಡಾನ್ಸ್ ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಜನರ ಸಂಕಷ್ಟ ಕೇಳಬೇಕಾದ ಸಿಎಂ ಈ ರೀತಿ ಕುಣಿದ್ರೆ ಹೇಗೆ‌ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | CM Siddaramaiah : ನಾನೇ 5 ವರ್ಷ ಸಿಎಂ ಹೇಳಿಕೆಗೆ ಯು ಟರ್ನ್‌ ಹೊಡೆದ ಸಿದ್ದರಾಮಯ್ಯ!

ನಮ್ಮ ರಾಜ್ಯದಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಸಿಎಂ ಇದ್ದಾರೆ. ಬರದಿಂದ ಜನ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಯಾರೇ ಅನ್ನದೇ ಸಿಎಂ ಸಂತೋಷದಿಂದ ಇದ್ದಾರೆ. ಸಿಎಂ ಕುಣಿದು‌ ಕುಪ್ಪಳಿಸಿ ಸಂತೋಷದಿಂದ ಇದ್ದರೆ ಹೇಗೆ? ಬೇರೆ ಪಕ್ಷದವರು ಏನಾದರೂ ಈ ರೀತಿ ಡಾನ್ಸ್ ಮಾಡಿದ್ದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈ ಸರ್ಕಾರದ ಬಗ್ಗೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.

Exit mobile version