ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಜಕೀಯ ಪಕ್ಷಗಳಿಗೆ ಬಂಡಾಯದ್ದೇ ಚಿಂತೆಯಾಗುತ್ತಿದೆ. ಟಿಕೆಟ್ ಪಟ್ಟಿ ಘೋಷಣೆಯಾಗುತ್ತಿದ್ದಂತೆ ವಂಚಿತರು ಪಕ್ಷ ತೊರೆಯುವ, ಪಕ್ಷೇತರ ನಿಲ್ಲುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಇನ್ನು ಘಟಾನುಘಟಿ ನಾಯಕರು ಸಹ ಪಕ್ಷಾಂತರ ಮಾಡುತ್ತಿದ್ದಾರೆ. ಈ ವೇಳೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಅನಿಲ್ ಬೆನಕೆ (Anil Beneke) ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅವರು ಸಿಡಿದೆದ್ದಿದ್ದರು. ಈಗ ಅವರ ಮನವೊಲಿಸುವಲ್ಲಿ ಪಕ್ಷ ಕೊನೆಗೂ ಯಶಸ್ವಿಯಾಗಿದೆ.
ಈ ಬಗ್ಗೆ ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ವಂಚಿತ ಬಿಜೆಪಿ ಶಾಸಕ ಅನಿಲ್ ಬೆನಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ಬಿಜೆಪಿ ಹೈಕಮಾಂಡ್ ರವಿ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಳೆದ 30 ವರ್ಷಗಳಿಂದ ಬಿಜೆಪಿ ಸಂಘಟನೆ ಮಾಡಿ ಗೆಲ್ಲಿಸಲು ನಾನು ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಆದರೆ, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರಲಿಲ್ಲ. 2018ರಲ್ಲಿ ನನ್ನನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿತು. ಜಾತಿ ಭೇದ ಮರೆತು ಬೆಳಗಾವಿ ಉತ್ತರ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದರು. ಐದು ವರ್ಷಗಳ ಕಾಲ ಜಾತಿ ಭೇದ ಭಾವ ಮಾಡದೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿ ಹೈಕಮಾಂಡ್ ಡಾ.ರವಿ ಪಾಟೀಲ್‌ಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಬಿಜೆಪಿಯಿಂದ ಲಿಂಗಾಯತ ನಾಯಕರಿಗೆ ಅಪಮಾನ; ಶೆಟ್ಟರ್ ಸೇರ್ಪಡೆ ವೇಳೆ ಸಿದ್ದರಾಮಯ್ಯ ವಾಗ್ಬಾಣ
ನನಗೆ ಎರಡು ಬಾರಿ ಟಿಕೆಟ್ ತಪ್ಪಿದಾಗಲೂ ನಾನು ಪಕ್ಷ ಬಿಟ್ಟಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಆ ಪಕ್ಷ ಸೇರುತ್ತಾರೆ, ಈ ಪಕ್ಷ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ವೈಯಕ್ತಿಕವಾಗಿ ನನಗೆ ಅನ್ಯಾಯವಾಗಿದ್ದು ನಿಜ. ಆದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಯಾವಾಗಲೂ ನಾನು ಬಿಜೆಪಿ ಜತೆಗಿದ್ದೇನೆ, ಹಿರಿಯ ನಾಯಕರು ನನ್ನ ಜತೆಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದ ಶಾಸಕ ಅನಿಲ್ ಬೆನಕೆ ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಲೋಕಸಭೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿಯರನ್ನು ಭೇಟಿಯಾಗಿದ್ದೇನೆ. ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯಿರಿ ಎಂದಿದ್ದಾರೆ. ನಾನು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಾತಿ ವಿಚಾರವಾಗಿ ನಿಮಗೆ ಟಿಕೆಟ್ ಕೈ ತಪ್ಪಿತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬೆನಕೆ, ಹಾಗೇನಿಲ್ಲ, ಎಲ್ಲ ಸಾಧಕ-ಬಾಧಕ ವಿಚಾರಿಸಿಯೇ ನಿರ್ಧರಿಸಿದ್ದಾರೆ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಬೆಳಗಾವಿಯ ಅನೇಕ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹಿಷ್ಕರಿಸಿ ಎಂದು ಮರಾಠಿ ಭಾಷೆಯಲ್ಲಿ ಬರೆದಿರುವ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಸಕ ಅನಿಲ್ ಬೆನಕೆ ಉತ್ತರ ನೀಡಲಿಲ್ಲ.
ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್, ಶಾಸಕ ಅಭಯ್ ಪಾಟೀಲ್, ಬಿಜೆಪಿ ಅಧಿಕೃತ ಅಭ್ಯರ್ಥಿ ಡಾ.ರವಿ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ. ಜಿರಲಿ ಉಪಸ್ಥಿತರಿದ್ದರು.