Site icon Vistara News

Karnataka Politics: ದೇಶದಲ್ಲಿ ಖಲಿಸ್ತಾನಿಗಳ ಉಗಮಕ್ಕೆ ಕಾಂಗ್ರೆಸ್‌ ಕಾರಣ ಎಂದ ಬಿಜೆಪಿ

Khalistan Flag

ಬೆಂಗಳೂರು: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿನ್ನೆಲೆಯಲ್ಲಿ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಾಂಧವ್ಯ ಹಳಸಿದೆ. ಖಲಿಸ್ತಾನಿ ನಾಯಕನ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹೇಳಿಕೆಗೆ ರಾಜ್ಯ ಬಿಜೆಪಿ (Karnataka Politics) ಆಕ್ರೋಶ ಹೊರಹಾಕಿದ್ದು, ಭಾರತದಲ್ಲಿ ಖಲಿಸ್ತಾನಿಗಳ ಉಗಮಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಆರೋಪಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ತನ್ನ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್‌ ಎಂತಹವರ ಜತೆ ಬೇಕಾದರೂ ‘ಕೈ’ ಜೋಡಿಸಲು ಸದಾ ಸಿದ್ಧವಾಗಿರುತ್ತದೆ ಎಂಬುದಕ್ಕೆ ಪಂಜಾಬಿನಲ್ಲಿ ಉಗಮಿಸಿದ ಖಲಿಸ್ತಾನಿಗಳೇ ಸಾಕ್ಷಿ. ಪಂಜಾಬ್‌ನಲ್ಲಿ ʼಕೈʼ ಪಕ್ಷ ತನ್ನ ಪಾರುಪತ್ಯ ಸಾಧಿಸಲು ಮೊದಲು ಆಶ್ರಯಿಸಿದ್ದೇ ಈ ಖಲಿಸ್ತಾನಿಗಳನ್ನು ಎಂದು ತಿಳಿಸಿದೆ.

ಇದನ್ನೂ ಓದಿ | ವಿಸ್ತಾರ Explainer: ಕೆನಡಾದ ಜಸ್ಟಿನ್‌ ಟ್ರುಡೋ ಸರ್ಕಾರ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವುದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

ಭಿಂದ್ರನ್‌ವಾಲೆಯಂಥ ಉಗ್ರರನ್ನು ಪೋಷಿಸುತ್ತಾ, ಅವರಿಗೆ ಆರ್ಥಿಕ ಸಹಾಯವನ್ನು ಸಹ ಕಾಂಗ್ರೆಸ್‌ ನೀಡುತ್ತಿತ್ತು. ಸಂಜಯ್‌ ಗಾಂಧಿ ತಂಡದಲ್ಲಿದ್ದ ಕಮಲ್‌ ನಾಥ್‌ ಖುದ್ದು ಖಲಿಸ್ತಾನಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಿದ್ದಕ್ಕೆ ಅನೇಕ ಸಾಕ್ಷಿ, ಪುರಾವೆಗಳಿವೆ. ಆದರೆ, ಕೊನೆಗೆ ಅದೇ ಖಲಿಸ್ತಾನಿಗಳೇ, ಕಾಂಗ್ರೆಸ್‌ನ ಬುಡಕ್ಕೆ ಬಿಸಿ ನೀರು ಕಾಯಿಸಿದ್ದು ಈಗ ಇತಿಹಾಸವಾಗಿದೆ ಎಂದು ಹೇಳಿದೆ.

ಕಾಂಗ್ರೆಸ್‌ನ ದತ್ತುಪುತ್ರರಾದ ಖಲಿಸ್ತಾನಿಗಳು ಭಾರತಕ್ಕೆ ನೀಡಿದ ಉಪಟಳ ಅಷ್ಟಿಷ್ಟಲ್ಲ. ಭಾರತವನ್ನು ಬಿಟ್ಟು ತೊಲಗಿದರೂ, ಭಾರತವನ್ನು ಸದಾ ದ್ವೇಷಿಸುತ್ತಾ ಭಾರತದ ವಿರುದ್ಧ ಸದಾ ಷಡ್ಯಂತ್ರ ರೂಪಿಸುವುದರಲ್ಲೆ ನಿರತರಾಗಿದ್ದರು. ಪಾಕಿಸ್ತಾನದ ಪ್ರೇರಣೆ ಹಾಗೂ ಕೆನಡಾದ ಕೆಲವು ಉಪದ್ಯಾಪಿಗಳ ಸಹಕಾರದೊಂದಿಗೆ ಭಾರತದ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಖಲಿಸ್ತಾನಿಗಳಿಗೆ ಬೆಂಬಲವಾಗಿ ಕೆನಡಾ ಸರ್ಕಾರ ನಿಂತಿತ್ತು.

ಕೆನಡಾ ಸರ್ಕಾರದ ಈ ನಿರ್ಧಾರವನ್ನು, ಕಟು ಶಬ್ದಗಳಲ್ಲಿ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ನಾವು ಈ ಹಿಂದೆಯೇ ಕೆನಡಾಕ್ಕೆ ಎಲ್ಲಾ ಪುರಾವೆಗಳನ್ನು ನೀಡಿದ್ದೇವೆ, ಆದರೆ ಖಲಿಸ್ತಾನ್‌ ಮೇಲಿನ ಅವರ ಪ್ರೀತಿಯು ಭಯೋತ್ಪಾದಕ ಗುಂಪುಗಳನ್ನು ಪ್ರಾಯೋಜಿಸುತ್ತಿದೆ” ಎಂದು ತಮ್ಮದೇ ಶೈಲಿಯಲ್ಲಿ ಕುಟುಕಿದ್ದರು.

ಭಾರತ ಸದಾ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಮತ್ತು ಭಯೋತ್ಪಾದಕರ ಬೆಂಬಲಿಗರ ವಿರೋಧಿ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ನೀಡಿದ್ದು ಸಹ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ಇದರ ಜತೆಜತೆಗೆ ಖಲಿಸ್ತಾನಿ ಭಯೋತ್ಪಾದಕ ಚಳವಳಿಗೆ ಯಾವುದೇ ಸಂಭಾವಿತ ದೇಶದ ಬೆಂಬಲ ಸಹ ದೊರೆಯದಂತೆ ಒತ್ತಡ ಹೇರುವಲ್ಲಿ ಸಹ ಮೋದಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ.

ಇದನ್ನೂ ಓದಿ | India Canada Row: ಖಲಿಸ್ತಾನಿ ಬೆದರಿಕೆಗೆ ಹಿಂದೂಗಳು ಹೆದರಲ್ಲ ಎಂದ ತುಮಕೂರು ಮೂಲದ ಕೆನಡಾ ಸಂಸದ ಆರ್ಯ

ಅಂದು ಕಾಂಗ್ರೆಸ್‌ ಬಿತ್ತಿದ ಬೀಜ, ಇಂದು ಹೆಮ್ಮರವಾಗಿ ಭಾರತ ಹಾಗೂ ಭಾರತೀಯರಿಗೆ ಕಿರುಕುಳ ನೀಡುತ್ತಿದೆ. ಆದರೆ ಇದಾವುದಕ್ಕೂ ಜಗ್ಗುವ, ಬಗ್ಗುವ ದೇಶ ನಮ್ಮದಲ್ಲ. ಪಾಕಿಸ್ತಾನ, ಚೀನಾ ದೇಶಗಳನ್ನೇ ಹಿಮ್ಮೆಟ್ಟಿಸಿದ ಸಮರ್ಥ ಹಾಗೂ ಸದೃಢ ನಾಯಕತ್ವ ಇದೀಗ ಭಾರತದ್ದಾಗಿದೆ ಎಂದು ಬಿಜೆಪಿ ಹೇಳಿದೆ.

Exit mobile version