Site icon Vistara News

Congress Protest: ಡ್ರಾಮಾ ಇನ್‌ ದಿಲ್ಲಿ; ರಾಜ್ಯ ಸರ್ಕಾರದ ಪ್ರತಿಭಟನೆಗೆ ಬಿಜೆಪಿ ಟೀಕೆ

Congress Protest

ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಫೆ.7ರಂದು ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಇದನ್ನು ಖಂಡಿಸಿರುವ ರಾಜ್ಯ ಬಿಜೆಪಿ, ಕನ್ನಡಿಗರ ತೆರಿಗೆ ಹಣದಲ್ಲಿ ಬಿಟ್ಟಿ ಜಾಹೀರಾತು ಕೊಟ್ಟು ಪ್ರಚಾರ ಪಡೆದುಕೊಂಡು ದೆಹಲಿಯಲ್ಲಿ ಶೋಕಿ ಮಾಡಲು ಕಾಂಗ್ರೆಸ್‌ ನಾಯಕರು ಹೋಗಿದ್ದಾರೆ. ರಾಜ್ಯ ಸರ್ಕಾರ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯ ಸರ್ಕಾರದ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಕರ್ನಾಟಕದ ಜನತೆ, ಕಾಂಗ್ರೆಸ್‌ಗೆ ಮತ ನೀಡಿದ್ದು ಗ್ಯಾರಂಟಿಗಳನ್ನು ನಂಬಿ!, ಆದರೆ, ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಮೋಜು ಮಸ್ತಿ ಮಾಡುತ್ತಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಬಿಟ್ಟಿ ಜಾಹೀರಾತು ಕೊಟ್ಟು ಪ್ರಚಾರ ಪಡೆದುಕೊಂಡು ದೆಹಲಿಯಲ್ಲಿ ಶೋಕಿ ಮಾಡಲು ಹೋಗಿದೆ. ಕನ್ನಡಿಗರ ಪ್ರಶ್ನೆಗಳಿಗೆ ಉತ್ತರ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ಸಿಗರು, ತಾವೇ ಮಾಡಿದ ಸುಳ್ಳುಗಳಿಗೆ ಸತ್ಯ ಹುಡುಕುತ್ತಿದ್ದಾರೆ. ಜಂತರ್‌ ಮಂತರ್‌ನಲ್ಲಿ ಬೃಹನ್ನಳೆ ನಾಟಕ ಮಾಡಲು ಮೇಕಪ್‌ ಹಾಕಿ ಕೂತಿದ್ದಾರೆ ಎಡಬಿಡಂಗಿ ಕಾಂಗ್ರೆಸ್ಸಿಗರು ಎಂದು ಬಿಜೆಪಿ ಟೀಕಿಸಿದೆ.

ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದೆ ಜನರಿಗೆ ರಾಜ್ಯ ಸರ್ಕಾರ ದ್ರೋಹ ಬಗೆದಿದೆ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಕನ್ನಡಿಗರ ಕಿವಿ ಮೇಲೆ ಕೈ ನಾಯಕರು ಹೂವಿಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಕುಟುಕಿದೆ.

‘ಹಸ್ತಂಗತ’ವಾಗಲು ಕಾಂಗ್ರೆಸ್‌ ಸಿದ್ಧತೆ

ದೀಪ ಆರುವಾಗ ಜೋರಾಗಿ ಉರಿಯುವಂತೆ, ದೇಶದಲ್ಲಿ ‘ಹಸ್ತಂಗತ’ವಾಗಲು ಕಾಂಗ್ರೆಸ್‌
ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಲೂಟಿ ಮಾಡುತ್ತಾ, ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ, ಅಧಿಕಾರಕ್ಕಾಗಿ ಕಿತ್ತಾಡುತ್ತಾ, ಅಭಿವೃದ್ಧಿ ಮಾಡದೆ ಪಲಾಯನ ಮಾಡುತ್ತಿದೆ ಕಾಂಗ್ರೆಸ್‌. ಇಂತಹ ಸೋಂಬೇರಿ ಸ್ಲೀಪಿಂಗ್‌ ಸರ್ಕಾರವನ್ನು ಪಡೆದ ಕರುನಾಡು ಪ್ರಾಯಶ್ಚಿತಕ್ಕೆ ಒಳಗಾಗಿದೆ! ಎಂದು ಬಿಜೆಪಿ ಹೇಳಿದೆ.

ಕೇವಲ ಹಗರಣಗಳಲ್ಲಿ ನಿರತ

2014 ರ ಮೊದಲು ಹತ್ತು ವರ್ಷಗಳವರೆಗೆ ಕೇಂದ್ರ ಕಾಂಗ್ರೆಸ್ ಸರ್ಕಾರ ಜನರ ಅಭಿವೃದ್ಧಿಯ ಬದಲು ಕೇವಲ ಹಗರಣಗಳಲ್ಲಿ ನಿರತವಾಗಿತ್ತು. ಆದರೆ, 2014 ರ ಬಳಿಕ ಕೇಂದ್ರದ ಬಿಜೆಪಿ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗದ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ತಿಳಿಸಿದೆ.

ನಾಳೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಧಾನಸೌಧದ ಬಳಿ ಬಿಜೆಪಿ ಪ್ರತಿಭಟನೆ

ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಫೆ.7ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ಹಮ್ಮಿಕೊಂಡಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಬಳಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.

ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಃ 222 ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದರೂ, ಈವರೆವಿಗೂ ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಪಕ್ಷದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಫೆಬ್ರವರಿ 7 ರ ಬುಧವಾರ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Exit mobile version