ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ (Karnataka Election) ಕಾವಿನ ಜತೆಗೆ ರಾಜಕಾರಣಿಗಳು ನೀಡುವ ಹೇಳಿಕೆ, ಸೃಷ್ಟಿಸುತ್ತಿರುವ ವಿವಾದಗಳು ಕೂಡ ಚುನಾವಣೆಯ ಕಣವನ್ನು ಕಾವೇರಿಸುತ್ತಿವೆ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೂಡ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದು ಕರೆದಿರುವುದು ಈಗ ವಿವಾದಕ್ಕೆ ಗ್ರಾಸವಾಗಿದ್ದು, ಪ್ರಿಯಾಂಕ್ ವಿರುದ್ಧ ಬಿಜೆಪಿಯು ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮೋದಿ ಅವರನ್ನು ಪ್ರಿಯಾಂಕ್, ನಾಲಾಯಕ್ ಎಂಬುದಾಗಿ ಹೇಳಿದ್ದಾರೆ. ಹಾಗಾಗಿ, ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ದೂರಿನಲ್ಲಿ ಕರ್ನಾಟಕ ಬಿಜೆಪಿ ಉಲ್ಲೇಖಿಸಿದೆ. ಕರ್ನಾಟಕ ಮುಖ್ಯ ಚುನಾವಣೆ ಆಯುಕ್ತರಿಗೆ ಬಿಜೆಪಿ ದೂರು ನೀಡಿದೆ.
ದೂರಿನ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ದಾಳಿ ಮುಂದುವರಿಸಿದೆ. ಇದಕ್ಕೂ ಮೊದಲು ಸಂವಿಧಾನ ವಿರೋಧಿ ಎಂದಿದ್ದರು. ಮೋದಿ ವಿಷ ಸರ್ಪ ಇದ್ದಹಾಗೆ ಎಂದು ಕೂಡ ಹೇಳಿದ್ದರು. ಈಗ ಪ್ರಿಯಾಂಕ್ ಖರ್ಗೆ ದಾಳಿ ನಡೆಸಿದ್ದಾರೆ. ಹಾಗಾಗಿ, ಪ್ರಿಯಾಂಕ್ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election: ‘ನಾಲಾಯಕ್’ ವಿಚಾರ; ಪ್ರಿಯಾಂಕ್ ಹೇಳಿದ್ದೇ ಬೇರೆ, ಮಾಧ್ಯಮದಲ್ಲಿ ತೋರಿಸೋದೇ ಬೇರೆ ಎಂದ ಖರ್ಗೆ
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಕಲಬುರಗಿಯಲ್ಲಿ ಪ್ರಚಾರಕ್ಕೆ ಬಂದಾಗ ಬಂಜಾರ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ʻʻಕಲಬುರಗಿಗೆ ಬಂದಾಗ ಬಂಜಾರ ಸಮಾಜಕ್ಕೆ ಧೈರ್ಯ ಹೇಳಿದ್ದೀರಿ.. ಬಂಜಾರ ಸಮುದಾಯದ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು. ಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೋಕೆ ಆಗುತ್ತಾ?ʼʼ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಮೋದಿ ವಿಷದ ಹಾವು ಇದ್ದಂತೆ ಎಂಬುದಾಗಿ ಮಲ್ಲಿ ಕಾರ್ಜುನ ಖರ್ಗೆ ಹೇಳಿದಾಗಲೂ ಅವರ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.