Site icon Vistara News

Udhayanidhi Stalin: ಉದಯನಿಧಿ ಸ್ಟಾಲಿನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ಕಾರವಾರ ಡಿವೈಎಸ್‌ಪಿಗೆ ಬಿಜೆಪಿ ದೂರು

BJP files complaint against Udhayanidhi Stalin

ಕಾರವಾರ: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ನಗರದ ಡಿವೈಎಸ್‌ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಸನಾತನ ಧರ್ಮ ತನ್ನದೇ ಆದ ಮಹತ್ವ ಹೊಂದಿದೆ. ಸನಾತನ ಧರ್ಮ ಯಾವುದೋ ಒಂದು ಗ್ರಂಥ ಅಥವಾ ಪ್ರವಾದಿಗೋ ಅಂಟಿಕೊಂಡ ಧರ್ಮವಲ್ಲ. ಸನಾತನ ಅಥವಾ ಹಿಂದು ಧರ್ಮ ಎಂದರೆ ಶಾಶ್ವತ ಧರ್ಮ ಮತ್ತು ಶಾಶ್ವತ ನಂಬಿಕೆ. ಇಂತಹ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಉದಯನಿಧಿ ಸ್ಟಾಲಿನ್ ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Krishna Janmashtami: ಶ್ರೀಕೃಷ್ಣ ಅಧರ್ಮದ ವಿರುದ್ಧ ಶಸ್ತ್ರ ಹಿಡಿಯದೆ ಹೋರಾಡಿ ದೈವತ್ವಕ್ಕೆ ಏರಿದ: ಸಿಎಂ ಸಿದ್ದರಾಮಯ್ಯ

ಉದಯನಿಧಿ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿಗೆ ಬರುವುದಿಲ್ಲ. ಅವರ ಹೇಳಿಕೆ ಅಪರಾಧಿ ಸ್ವಭಾವ ಹೊಂದಿದೆ. ಸರ್ವೆ ಜನಾಃ ಸುಖಿನೋ ಭವಂತು ಎಂದು ಬೋಧಿಸುವ ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎನ್ನುವ ಹೇಳಿಕೆ ಹಿಂದುಗಳ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ ಅವರಿಗೆ ನಾಗರಾಜ ನಾಯಕ ದೂರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಮನೋಜ್ ಭಟ್ಟ, ಸುನೀಲ್ ಥಾಮ್ಸೆ, ರವಿ ರಾವ್, ಉದಯ ಬಶೆಟ್ಟಿ, ಅರುಣ ಹಬ್ಬು, ಗಜಾನನ ಕುಬಾಡೆ, ಎಲ್.ಕೆ.ನಾಯ್ಕ, ರೋಷನಿ ಮಾಳ್ಸೇಕರ್, ಉಲ್ಲಾಸ ಕೇಣಿ, ಸಂದೇಶ್ ಶೆಟ್ಟಿ, ಸೂರ್ಯಪ್ರಕಾಶ್ ಶೆಟ್ಟಿ, ಮಹೇಂದ್ರ ಬಾನಾವಳಿ, ರವಿರಾಜ್ ಅಂಕೋಲೇಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ | Operation Hasta: ಆಪರೇಷನ್ ಹಸ್ತ ಮಾಡೋದಿಲ್ಲ, ನಮ್ದು ಕೇವಲ ಕೋ ಆಪರೇಷನ್ ಮಾತ್ರ ಎಂದ ಡಿಕೆಶಿ

ಉದಯನಿಧಿ ಸ್ಟಾಲಿನ್ ಮೇಲೆ ಕಾನೂನು ಕ್ರಮಕ್ಕೆ ರೂಪಾಲಿ ಆಗ್ರಹ

ನಮ್ಮ ಸನಾತನ ಧರ್ಮವನ್ನು ಅವಹೇಳನ ಮಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ. ನಮ್ಮ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎನ್ನುವ ಮೂಲಕ ಉದಯನಿಧಿ ಸ್ಟಾಲಿನ್ ನಮ್ಮ ಭಾವನೆಗಳ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ. ದೇಶಸೇವೆ ಮಾಡುವ ಸಂಘಟನೆಯ ವಿರುದ್ಧವೂ ಅವಹೇಳನಕರ ರೀತಿಯಲ್ಲಿ ಬರೆದಿದ್ದಾರೆ. ಸ್ಟಾಲಿನ್ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟಿಸಲು ಅವರು ಪ್ರೇರೇಪಿಸುತ್ತಿದ್ದಾರೆ. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮೂಲಕ ಇನ್ನು ಮುಂದೆ ಇಂತಹ ದುಸ್ಸಾಹಸಕ್ಕೆ ಯಾರೂ ಇಳಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version