ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅವರು ಈ ಸಲ ವಿಧಾನಸಭೆ ಚುನಾವಣೆ (Assembly Election)ಯಲ್ಲಿ ತಮಗೇ ಟಿಕೆಟ್ ಸಿಗುವಂತಾಗಲಿ, ನೀವೆಲ್ಲ ಆಶೀರ್ವಾದ ಮಾಡಿ ಎನ್ನುತ್ತ ವೇದಿಕೆ ಮೇಲೆಯೇ ಕಣ್ಣೀರಿಟ್ಟು, ನೆರೆದಿದ್ದ ಜನರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.
ಎಸ್.ಐ. ಚಿಕ್ಕನಗೌಡ ಅವರು ಬಿ.ಎಸ್.ಯಡಿಯೂರಪ್ಪನವರ ಸಂಬಂಧಿ. ಈ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಕುಂದಗೋಳ ಕ್ಷೇತ್ರದ ಟಿಕೆಟ್ ಕೈತಪ್ಪುವ ಭಯ ಎದುರಾಗಿದೆ. ಪ್ರಸಕ್ತ ಬಾರಿ ಬಿಜೆಪಿ ವರಿಷ್ಠರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತ ಎಂ.ಆರ್.ಪಾಟೀಲ್ಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ಅವರಿಗೇ ಟಿಕೆಟ್ ಪಕ್ಕಾ ಎಂಬ ಮಾಹಿತಿ ಲಭ್ಯವಾಗಿದೆ. ಅದರ ಬೆನ್ನಲ್ಲೇ ಎಸ್.ಐ.ಚಿಕ್ಕನಗೌಡ ವೇದಿಕೆ ಮೇಲೆ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ. ಗಳಗಳನೇ ಅತ್ತಿದ್ದಾರೆ.
ಗುರುವಾರ ತಮ್ಮ ಕ್ಷೇತ್ರ ಕುಂದಗೋಳದಲ್ಲೇ ಜನ್ಮದಿನ ಆಚರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ ಚಿಕ್ಕನಗೌಡ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ‘ನಾನು ಕಳೆದ ಎರಡು ಚುನಾವಣೆಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. 2018ರಲ್ಲಿ 634 ಮತಗಳಿಂದ, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಕೇವಲ 1601 ಮತಗಳ ಅಂತರದಿಂದ ಪರಾಭವಗೊಂಡಿದ್ದೇನೆ.ಆದರೂ ನಾನು ಧೃತಿಗೆಡಲಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಮತ್ತೊಮ್ಮೆ ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ’ ಎಂದು ಜನರ ಬಳಿ ಹೇಳಿದರು.
ಇದನ್ನೂ ಓದಿ: BJP Meeting | ಬಿಜೆಪಿ ಕಾರ್ಯಕಾರಿಣಿ; 2024ರ ಲೋಕಸಭೆ, 9 ವಿಧಾನಸಭೆ ಚುನಾವಣೆಗೆ ಪಕ್ಷ ರಣತಂತ್ರ, ರವಿಶಂಕರ್ ಪ್ರಸಾದ್ ಮಾಹಿತಿ
ಇದೊಂದು ಬಾರಿ ನಾನು ಟಿಕೆಟ್ ಕೊಡುವಂತೆ ನಾಯಕರ ಬಳಿ ಬೇಡಿಕೆ ಇಟ್ಟಿದ್ದೇನೆ. ಕಾಲಿಗೆ ಬೀಳುತ್ತೇನೆ, ಕೈ ಮುಗಿಯುತ್ತೇನೆ ನನಗೇ ಟಿಕೆಟ್ ಕೊಡಿ. ನನ್ನ ಪರಿಸ್ಥಿತಿ ಸರಿಯಿಲ್ಲ. ಈ ಕ್ಷೇತ್ರದ ಜನರು ಇದೊಂದು ಬಾರಿ ನನಗೆ ಆಶೀರ್ವಾದ ಮಾಡಲಿ. ಜನರು ತೀರ್ಮಾನ ಮಾಡಿದರೆ, ಯಾರೇ ಬಂದರೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ದಯವಿಟ್ಟು ಆಶೀರ್ವದಿಸಿ’ ಎನ್ನುತ್ತ ವೇದಿಕೆ ಮೇಲಿಂದ ಜನರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.