ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Karnataka Election 2023) ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ರಾಜ್ಯಕ್ಕೆ ಆಗಾಗ ಭೇಟಿ ಕೊಡುತ್ತಲೇ ಇದ್ದಾರೆ. ಈ ಫೆಬ್ರವರಿಯಲ್ಲಿಯೂ ಮ್ಯಾರಥಾನ್ ಭೇಟಿಯನ್ನು ನಿಗದಿ ಮಾಡಿಕೊಂಡಿದ್ದು, ಈ ಮೂಲಕ ಮತಬೇಟೆಗೆ ತಯಾರಿ ನಡೆಸಿದೆ. ಇದರ ಭಾಗವಾಗಿ ಭಾನುವಾರ (ಫೆ. ೧೯) ಕರಾವಳಿ ಭಾಗವಾದ ಉಡುಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಭೇಟಿ ಕೊಡಲಿದ್ದರೆ, ಇದೇ ಫೆಬ್ರವರಿ ೨೩ರಂದು ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಖ್ಯಾತಿಯ ಅಮಿತ್ ಶಾ (Amit Shah) ಬಳ್ಳಾರಿಯ ಸಂಡೂರಿಗೆ ಭೇಟಿ ನೀಡಲಿದ್ದಾರೆ. ಇನ್ನು ಮಂಡ್ಯದಲ್ಲಿ ಫೆಬ್ರವರಿ ೨೦ರಂದು ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅಖಾಡಕ್ಕೆ ಇಳಿದಿದ್ದಾರೆ.
ನಡ್ಡಾ ಉಡುಪಿ ಪ್ರವಾಸ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ (ಫೆ. ೨೦) ಉಡುಪಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಭಾಗವಾಗಿ ಭಾನುವಾರವೇ (ಫೆಬ್ರವರಿ 19) ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 20ಕ್ಕೆ ಉಡುಪಿಗೆ ಆಗಮಿಸಲಿದ್ದು, ಉಡುಪಿಯ ಎಂಜಿಎಮ್ ಮೈದಾನದಲ್ಲಿ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ 1111 ಬೂತ್ ಕಮಿಟಿಗಳ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಸುಮಾರು 15 ಸಾವಿರ ಬಿಜೆಪಿ ಕಾರ್ಯಕರ್ತರಿಗೆ ನಡ್ಡಾ ಪೊಲಿಟಿಕಲ್ ಕ್ಲಾಸ್ ನೀಡಲಿದ್ದಾರೆ.
ಇದನ್ನೂ ಓದಿ: Ram Mandir: ರಾಮನಗರದ ರಾಮಮಂದಿರಕ್ಕೆ ಮಾರ್ಚ್‌ನಲ್ಲೇ ಭೂಮಿಪೂಜೆ; ಯೋಗಿಯಿಂದಲೇ ಶಂಕು?
ಉಡುಪಿ ಶ್ರೀಗಳ ಭೇಟಿ
ಇದೇ ಸಂದರ್ಭದಲ್ಲಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಬಳಿಕ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಬೈಂದೂರು ವಿಧಾನಸಭಾ ಕ್ಷೇತ್ರದ ಮುಳ್ಳಿಕಟ್ಟೆಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಸುಮಾರು 20,000 ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು, ಬೈಂದೂರಿನಿಂದ ಚಿಕ್ಕಮಗಳೂರಿನ ಹರಿಹರಪುರಕ್ಕೆ ಅಲ್ಲಿಂದ ಜೆಪಿ ನಡ್ಡಾ ತೆರಳಿದ್ದಾರೆ.
23ರಂದು ಸಂಡೂರಿನಲ್ಲಿ ಅಮಿತ್ ಶಾ ಸಮಾವೇಶ
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಫೆ.23ರಂದು ಸಂಡೂರಿಗೆ ಆಗಮಿಸಲಿದ್ದು, ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಅಂದು ತೋರಣಗಲ್ಲಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ಅಖಾಡಕ್ಕೆ ಧುಮುಕಿದ ವಿಜಯೇಂದ್ರ
ಮಂಡ್ಯದಲ್ಲಿ ಫೆಬ್ರವರಿ ೨೦ರಂದು ಬಿಜೆಪಿಯ ಯುವ ಮೋರ್ಚಾ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ (ಫೆ. ೧೮) ಮಂಡ್ಯ ಭಾಗದ ಬಿಜೆಪಿ ಜಿಲ್ಲಾ ಮುಖಂಡರ ಸಭೆಯನ್ನು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡೆಸಿದರು. ರಾಜ್ಯದಲ್ಲಿ ಮೋರ್ಚಾ ಸಮಾವೇಶವನ್ನು ನಡೆಸುವ ಜವಾಬ್ದಾರಿಯನ್ನು ಅವರಿಗೆ ವರಿಷ್ಠರು ನೀಡಿರುವ ಬೆನ್ನಲ್ಲೇ ಸಖತ್ ಬ್ಯುಸಿಯಾಗಿರುವ ವಿಜಯೇಂದ್ರ, ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿಯೇ ಯುವ ಮೋರ್ಚಾ ಸಮಾವೇಶಗಳು ನಡೆಯಲಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಅಖಾಡವನ್ನು ಸಿದ್ಧಪಡಿಸಲು ವಿಜಯೇಂದ್ರ ಈಗ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಈ ಮೂಲಕ ರಣತಂತ್ರ ಹೆಣೆಯಲೂ ಮುಂದಾಗಿದ್ದಾರೆ.
ಇದನ್ನೂ ಓದಿ: Siddaramaiah: ಮಗುವಿಗೆ ತಮ್ಮ ಹೆಸರನ್ನೇ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!
ಕಳೆದ ಬಾರಿ ಕೆ.ಆರ್. ಪೇಟೆ ಉಪ ಚುನಾವಣೆಯ ನೇತೃತ್ವ ವಹಿಸಿದ್ದ ವಿಜಯೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ವಿಜಯೇಂದ್ರ ಒತ್ತು ನೀಡಿದ್ದಾರೆ.