ಬೆಳಗಾವಿ: ಮುಂದಿನ ದಿನಗಳಲ್ಲಿ ಶಾಲೆಗಳಲ್ಲೂ ವೀರ ಸಾವರ್ಕರ್ ಫೋಟೊ ಹಾಕುವ ಬಗ್ಗೆಯೂ ಚಿಂತನೆ ಇದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಳಗಾವಿ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದ್ದನ್ನು ಸಮರ್ಥಿಸಿದರು. ಇದರ ಬಗ್ಗೆ ವಿರೋಧ ವ್ಯಕ್ತಪಡಿಸದೆ ಇರುವ ಕಾಂಗ್ರೆಸ್ ನಿಲುವನ್ನು ಸ್ವಾಗತಿಸಿದ ಅವರು, ʻʻಸಾವರ್ಕರ್ ಬಗ್ಗೆ ಕಾಂಗ್ರೆಸ್ ಪಕ್ಷದವರು ಈಗ ಸಾಫ್ಟ್ ಕಾರ್ನರ್ ಹೊಂದಿದಂತೆ ಆಡುತ್ತಿದ್ದಾರೆ. 75 ವರ್ಷದ ಬಳಿಕ ಈಗ ಅವರಿಗೆ ಜ್ಞಾನೋದಯ ಆಗಿದೆ ಅಂತಾ ಅರ್ಥʼʼ ಎಂದರು ಸುನಿಲ್ ಕುಮಾರ್.
ಕನ್ನಡಿಗರ ಹಿತವೇ ಪ್ರಮುಖ
ʻʻಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಸಿಎಂಗಳ ಜತೆ ಮಾತುಕತೆ ನಡೆಸಿದ್ದಾರೆ. ಗಡಿ ವಿಚಾರದಲ್ಲಿ ಕರ್ನಾಟಕ ಕನ್ನಡಿಗರ ಭಾವನೆಗಳಿಗೆ ಗರಿಷ್ಠ ಆದ್ಯತೆ ನೀಡುತ್ತದೆ. ಯಾವತ್ತೂ ಅವರ ಭಾವನೆಗಳನ್ನು ಧಿಕ್ಕರಿಸುವ ಪ್ರಯತ್ನ ಮಾಡಿಲ್ಲ, ಮಾಡುವುದಿಲ್ಲʼʼ ಎಂದು ಸುನಿಲ್ ಕುಮಾರ್ ಹೇಳಿದರು.
ʻʻವಿಧಾನಸಭೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸಂಬಂಧಿಸಿದಂತೆ ಮಸೂದೆ ಮಂಡನೆ ಮಾಡುತ್ತೇವೆ. ರಚನೆಯಾದ ಹೊಸ ತಾಲೂಕುಗಳನ್ನು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ಮಸೂದೆ ಮಂಡನೆ ಮಾಡುತ್ತೇವೆ. ನಮ್ಮ ಸರ್ಕಾರ ಗಡಿಯಲ್ಲಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇವೆʼʼ ಎಂದು ಹೇಳಿದರು.
ಇದನ್ನೂ ಓದಿ | Development Programme | ಗಡಿ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು, ಶಾಲೆಗಳ ಅಭಿವೃದ್ಧಿಗೆ ಕ್ರಮ: ಸಿಎಂ ಬೊಮ್ಮಾಯಿ