ಬೆಂಗಳೂರು: ಬೇರೆ ರಾಜ್ಯಗಳಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ (Mysore sandal soap) ಮಾರಾಟವಾಗುತ್ತಿದೆ. ಈ ಬಗ್ಗೆ ಕೆಎಸ್‌ಡಿಎಲ್ ಎಂಡಿ ಪ್ರಶಾಂತ್‌ಗೆ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದರು. ತನಿಖೆ ನಡೆಸಿದಾಗ ಹೈದರಾಬಾದ್‌ನಲ್ಲಿ ನಕಲಿ ಸೋಪ್ ತಯಾರಿಕೆ ಜಾಲ ಪತ್ತೆಯಾಗಿದೆ. ಈ ಸುಳಿವಿನ ಆಧಾರದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಅವರು ಬಿಜೆಪಿಯ ಸಕ್ರಿಯ ನಾಯಕರು ಎಂಬುವುದು ತಿಳಿದುಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಣೆ ಸಂದರ್ಭದಲ್ಲಿ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಬಿಜೆಪಿಯ ಸಕ್ರಿಯ ನಾಯಕರು ಎಂಬುವುದು ತಿಳಿದುಬಂದಿದೆ. ಇವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ತೆಲಂಗಾಣದ ಶಾಸಕ ರಾಜಾಸಿಂಗ್, ಕಲಬುರಗಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹಾಗೂ ಬಿಜೆಪಿ ಮುಖಂಡ ವಿಠಲ್ ನಾಯಕ್ ಜತೆಗೆ ಸಂಪರ್ಕ ಹೊಂದಿದ್ದಾರೆ. ಅವರ ಜತೆಗಿನ ಫೋಟೊ ಕೂಡ ಇದೆ. ಬಿಜೆಪಿಯವರು ಯಾಕೆ ಇಂತಹವರ ಜತೆ ಜೊತೆಗೆ ಕಾಣಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಆಸ್ತಿ ಮಾರಾಟಕ್ಕೆ ಹೊರಟವರಿಗೆ ಏಕೆ ಟಿಕೆಟ್ ಕೊಡುತ್ತಿದ್ದೀರಿ? ನಿಮ್ಮ ಎಲ್ಲ ವ್ಯವಹಾರ ಇಂತವರ ಬಳಿ ಇದೆ. ಆ ಕಾರಣಕ್ಕಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಇದರಲ್ಲಿ ನಿಮ್ಮ ಪಾಲು ಇದೆ ಎಂದು ತೋರಿಸುತ್ತದೆ. ಕರ್ನಾಟಕದ ಗೌರವ ಅಡ ಇಟ್ಟು ಎಷ್ಟು ಗಳಿಸ್ತಿದ್ದೀರಾ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | MP Pratapsimha : ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆಶಿಗೆ ಗುಂಡು ಹೊಡೆದ ಸಿದ್ದರಾಮಯ್ಯ!
ನಕಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಬಿಜೆಪಿಯವರೇ ನಡೆಸಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಕರ್ನಾಟಕದ ಮರ್ಯಾದೆ ಮಾರಾಟಕ್ಕೆ ಇಟ್ಟವರ ಪರವಾಗಿ ರಾಮ ಭಕ್ತರು ಎಂದು ಬೀದಿಗೆ ಇಳಿಯುತ್ತೀರಾ? ಬಿಜೆಪಿಗರು ಕನ್ನಡ ವಿರೋಧಿಗಳು, ದುಡ್ಡಿಗೋಸ್ಕರ ಯಾವುದಕ್ಕೂ ಹೇಸುವುದಿಲ್ಲ. ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಇದಕ್ಕೆ ಉತ್ತರ ಕೊಡಬೇಕಿದೆ ಎಂದು ಒತ್ತಾಯಿಸಿದ ಅವರು, ನಮ್ಮ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಇದ್ದಾರೆ. ನಾನು ಬೆಳಗ್ಗೆ ತೆಲಂಗಾಣ ಡಿಸಿಎಂ ಜತೆಗೆ ಮಾತನಾಡಿದ್ದೇನೆ. ತನಿಖೆಗೆ ಸಹಕಾರ ನೀಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಮೈಸೂರು ಸ್ಯಾಂಡಲ್ ಸೋಪ್ ನಕಲಿ ಮಾಡಿ ರಾಜ್ಯದ ಮರ್ಯಾದೆ ಹಾಳು ಮಾಡಿದ್ದಾರೆ. ನೀವು ಇಂತವರ ಪರ ಹೋರಾಟ ಮಾಡುತ್ತೀರಾ ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ನಡೆಸಿದರು.
ಬಿಜೆಪಿ ವ್ಯವಹಾರ ರೌಡಿಗಳ ಕೈಯಲ್ಲಿದೆ
ಬಿಜೆಪಿ ಗೋಡೌನ್‌ನಲ್ಲಿ 700 ಕ್ವಿಂಟಾಲ್ ಅಕ್ಕಿ ಸಿಕ್ಕಿದೆ. ಯಾದಗಿರಿಯಲ್ಲಿ ಗರೀಬ್ ಕಲ್ಯಾಣ್ ಯೋಜನೆ ಅಕ್ಕಿ ಸಿಕ್ಕಿದೆ. ಅದು ಮಣಿಕಂಠ್ ರಾಥೋಡ್ ತಮ್ಮನಿಗೆ ಸೇರಿದ್ದಂತೆ. ಇವರು ಯಾರ ಮೇಲೂ ಕ್ರಮ ಜರುಗಿಸಲಿಲ್ಲ. ಬಿಜೆಪಿ ವ್ಯವಹಾರ ರೌಡಿಗಳ ಕೈಯಲ್ಲಿದೆ. ಸ್ಯಾಂಟ್ರೋ ರವಿ, ಫೈಟರ್ ರವಿ, ಸೈಲೆಂಟ್ ಸುನೀಲ್ ನಂತಹವರ ಕಡೆ ಇದೆ. ಹಿಂದಿನಿಂದಲೂ ನಕಲಿಜಾಲ ನಡೆಸುತ್ತಿದ್ದಾರೆ. ಇದರಿಂದ ಬಿಜೆಪಿಗೂ ಲಾಭ ಹೋಗುತ್ತಿದೆ. ಈ ವಿಚಾರಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು ಎಂದು ತಾಕೀತು ಮಾಡಿದರು.
ಅನಂತ್ ಕುಮಾರ್ ಹೆಗಡೆ ಬಗ್ಗೆ ಕಿಡಿಕಾರಿದ ಅವರು, ಇವರು ಎಲ್ಲಿದ್ದರು. ಮೂವರನ್ನು ಬೈಯ್ಯುವುದೇ ಅವರ ಕೆಲಸ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ನನ್ನ ಹೆಸರು ಹೇಳಳಿಲ್ಲ ಎಂದರೆ ಊಟ ಜೀರ್ಣವಾಗೋದೆ ಇಲ್ಲ. ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಅವರು, ಎಷ್ಟು ಜನರಿಗೆ ಅವರು ಉದ್ಯೋಗ ಕೊಟ್ಟಿದ್ದರು. ಅವರು ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಆಂಟ್ರಪ್ರೀನರ್‌ಶಿಪ್ ಸ್ಪೆಲ್ಲಿಂಗ್ ಹೇಳಿ ಬಿಡಲಿ ನೋಡೋಣ. ಚರ್ಚೆಗೆ ಬರಲಿ ಎಂದಿದ್ದಾರಲ್ಲಾ? ನಾಲ್ವರು ಶಂಕರಾಚಾರ್ಯರ ಜತೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.
ಅನಂತ್ ಕುಮಾರ್ ಹೆಗಡೆಗೆ ಪ್ರಾಣ ಪ್ರತಿಷ್ಠೆ ಬಗ್ಗೆ ಮೀನಿಂಗ್ ಕೇಳಿಬಿಡಿ, ಮೂರ್ತಿಗೆ ಜೀವ ತುಂಬುವುದನ್ನು ಪ್ರಾಣಪ್ರತಿಷ್ಠೆ ಎನ್ನುತ್ತಾರೆ. ಸಾಧು ಸಂತರು ಇದನ್ನು ಮಾಡುತ್ತಾರೆ. ಶಂಕರಾಚಾರ್ಯರು ನಾಲ್ಕು ಪ್ರಶ್ನೆ ಕೇಳಿದ್ದಾರೆ. ಪ್ರಾಣಪ್ರತಿಷ್ಠೆ ಮಾಡೋರು ನಾವು, ಪ್ರಧಾನಿಗಳು ಏನು ಮಾಡುತ್ತಾರೆ? ಜನವರಿ 22ರಂದೇ ಯಾಕೆ ಮಾಡಬೇಕು ಅಂದಿದ್ದಾರೆ. ಹಿಂದು ಧರ್ಮದ ವಿಧಿವಿಧಾನದ ಪ್ರಕಾರ ಆಗುತ್ತಿಲ್ಲ, ಪ್ರಾಣಪ್ರತಿಷ್ಠೆ ಆಗೋಕೆ ದೇಗುಲ ಕಾಮಗಾರಿ ಪೂರ್ಣವಾಗಿರಬೇಕು. ಅಪೂರ್ಣವಾದ ವೇಳೆ ಯಾಕೆ ಅವಸರ ಮಾಡುತ್ತೀರಿ? ಎಂದು ಸರಳ ಪ್ರಶ್ನೆಗಳನ್ನು ಶಂಕರಾಚಾರ್ಯರು ಕೇಳಿದ್ದಾರೆ. ಆದರೆ ಯಾಕೆ ಇದಕ್ಕೆ ಬಿಜೆಪಿಯವರು ಉತ್ತರ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಎಷ್ಟು ಎಂಪಿಗಳು ಗೋಶಾಲೆ ಮಾಡಿದ್ದಾರೆ. ಎಷ್ಟು ಎಂಪಿಗಳು ಗೋಮೂತ್ರ ಕುಡಿಯುತ್ತಾರೆ. ಎಷ್ಟು ಜನರ ಮಕ್ಕಳು ಗೋಮೂತ್ರ ಕುಡಿಯುತ್ತಾರೆ. ಇದರ ಬಗ್ಗೆ ಅವರು ಹೇಳಿಬಿಡಲಿ. ನಾನು, ನನ್ನ ಮಗನಿಗೆ ಬಸವತತ್ವ ಹೇಳಿಕೊಡುತ್ತೇನೆ. ಸಂವಿಧಾನದ ಬಗ್ಗೆ ಹೇಳಿ ಕೊಡುವೆ. ನಾವು ಅವರು ಬೇರೆ. ಇವರು ಬೇರೆ ಅಂತ ಹೇಳಿಕೊಡಲ್ಲ. ಎಲ್ಲರೂ ಒಂದೇ ಎಂದು ಹೇಳಿಕೊಡ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ರಾಮ ಮಂದಿರ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ಯಾವಾಗ ಭಕ್ತಿ ಬರುತ್ತೋ ಆಗ ಹೋಗುತ್ತೇವೆ. ನಾನು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗಲ್ಲ ಎಂದರು.
ಸಚಿವ ಕೆ.ಎನ್ ರಾಜಣ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಎಲ್ಲರೂ ತಪ್ಪಾಗಿ ಅರ್ಥೈಸಿ ಕೊಂಡಿದ್ದಾರೆ. ನಾನು ರಾಜಣ್ಣ ಅವರ ಹೇಳಿಕೆ ನೋಡಿದ್ದೇನೆ. ರಾಜಣ್ಣನವರು ಹೇಳಿದ್ದು, ನಾವು ನೋಡಲು ಹೋದಾಗ ದೇವಸ್ಥಾನ ಇರಲಿಲ್ಲ. ಮೇಕ್ ಶಿಫ್ಟ್ ಟೆಂಪಲ್ ಇತ್ತು, ಟೆಂಟ್ ಹಾಕಿ ಕೂರಿಸಿದ್ದರು. ಬಾಬ್ರಿ ಮಸೀದಿ ಬೀಗ ತೆಗೆದಾಗ ಮೂರ್ತಿ ಇರಲಿಲ್ಲ. ಆಗ ಒಬ್ಬರ ಮನೆಯಿಂದ ಮೂರ್ತಿ ತಂದು ಇಟ್ಟಿದ್ದರು. ಮೇಕ್ ಶಿಫ್ಟ್ ಟೆಂಪಲ್ ಇತ್ತು ಎಂದು ಹೇಳಲು ರಾಜಣ್ಣ ಆ ರೀತಿ ಹೇಳಿರಬಹುದು ಎಂದ ಪ್ರಿಯಾಂಕ್ ಖರ್ಗೆ ಹೇಳದರು.
ಇದನ್ನೂ ಓದಿ | CM Siddaramaiah: ಯತೀಂದ್ರ ಸಿದ್ದರಾಮಯ್ಯ ಉದ್ಭವ ಆಗುತ್ತಿರುವ ನಾಯಕ; ಡಿ.ಕೆ. ಶಿವಕುಮಾರ್ ವ್ಯಂಗ್ಯ
ರಾಮಭಕ್ತರೆಲ್ಲಾ ಕರ್ನಾಟಕದ ಅಸ್ಮಿತೆಯನ್ನು ಅಡ ಇಡುತ್ತಿದ್ದಾರೆ, ಯಾಕೋ ಗೊತ್ತಿಲ್ಲ. ಅವನು ಶ್ರೀಕಾಂತ್ ರಾಮ ಭಕ್ತ ಅಂತಾನೆ. ಆತನ ಮೇಲೆ ಜೂಜಾಟದ ವಿಚಾರವಾಗಿ ಕೇಸ್ ಹಾಕಿದ್ದಾರೆ ಎಂದು ಹೇಳಿದರು.