Site icon Vistara News

BJP Protest: ಜನವಿರೋಧಿ ನೀತಿಗಳಿಗೆ ಆಕ್ರೋಶ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕೇಸರಿ ಪಡೆ

BJP protest at Freedom park

#image_title

ಬೆಂಗಳೂರು: ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ (BJP Protest) ನಡೆಸಿದರು. ವಿದ್ಯುತ್‌ ದರ ಏರಿಕೆ, ಹಾಲಿನ ಖರೀದಿ ದರ ಕಡಿತ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಪ್ರಸ್ತಾವನೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ವಿವಿಧ ಷರತ್ತುಗಳನ್ನು ವಿಧಿಸಿರುವುದನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.

ವಚನ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ: ಮಾಜಿ ಸಚಿವ ಅಶ್ವತ್ಥನಾರಾಯಣ

BJP leaders protest at sirsi

ಬೆಂಗಳೂರು: ನಗರ ಬಿಜೆಪಿ ಜಿಲ್ಲಾ ಘಟಕದಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಗೋ ಪೂಜೆ ಮೂಲಕ ಬಿಜೆಪಿ ನಾಯಕರು ಪ್ರತಿಭಟನೆ ಆರಂಭಿಸಿದರು. ಸಂಸದ ಪಿ.ಸಿ. ಮೋಹನ್ , ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ಸಿ.ಕೆ..ರಾಮಮೂರ್ತಿ, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ರವಿ ಕುಮಾರ್, ಕೇಶವ್ ಪ್ರಸಾದ್, ಉಮೇಶ್ ಶೆಟ್ಟಿ, ಸಪ್ತಗಿರಿ ಗೌಡ, ಭಾಸ್ಕರ ರಾವ್ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಶಾಸಕ, ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ದ್ವೇಷದ ರಾಜಕೀಯ ‌ಮಾಡಬೇಡಿ, ಅಧಿಕಾರದ ಅಮಲು ನಿಮ್ಮ ತಲೆಗೆ ಏರಿದೆ. ಆಕಾಶದ ಮೇಲೆ ಅಲ್ಲದೆ ಭೂಮಿ ಮೇಲೆ ನಡೆಯಿರಿ. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆದರೆ ನಾವು ಒಪ್ಪಲ್ಲ. ಗ್ಯಾರಂಟಿ ಯೋಜನೆಗಳು ಫ್ರೀ ಎಂದು ಹೇಳಿ ಈಗ ಷರತ್ತುಗಳನ್ನು ವಿಧಿಸಿದ್ದಾರೆ. ವಚನ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಕಿಡಿಕಾರಿದರು.

ಕಾಂಗ್ರೆಸ್ ಸಿಎಂ, ಡಿಸಿಎಂಗೆ ಜನರ ರಕ್ತ ಹೀರುವುದೆ ಕೆಲಸ. ಡಿ.ಕೆ. ಶಿವಕುಮಾರ್ ಇಂಧನ ಸಚಿವ ಆಗಿದ್ದಾಗ ಸೋಲಾರ್ ಪ್ಲಾಂಟ್ ಅನ್ನು ಸೆಕೆಂಡ್‌ಗಳಲ್ಲಿ ಹರಾಜು ಹಾಕಿದರು. ಹೀಗಾಗಿ ಈಗ ವಿದ್ಯುತ್ ಬೆಲೆ ಹೆಚ್ಚಳವಾಗಿದೆ. ಅಧಿಕಾರಕ್ಕೆ‌ ಬಂದ ನಂತರ ಇವರು ಸರ್ಕಾರ ಮಾಡಿದ್ದು ಬೆಲೆ‌ ಏರಿಕೆ ಮಾತ್ರ. ವಿದ್ಯುತ್‌ ಬೆಲೆ ಹೆಚ್ಚಿಸಿದ್ದಾರೆ. ಗ್ಯಾರಂಟಿ ಕೊಡುತ್ತೇವೆ ಎಂದು ಜನರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಒಳ್ಳೆ ಆಡಳಿತ ಕೊಡಬೇಕು. ಜೈಲಿಗೆ ಹಾಕುತ್ತೇವೆ ಎನ್ನುವುದಕ್ಕೆ ನೀವೇನು ಜಡ್ಜ್‌ಗಳಾ? ದ್ವೇಷದ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಸಾಂಕೇತಿಕವಾಗಿ ನಾವು ಇವತ್ತು ಪ್ರತಿಭಟನೆ ಮಾಡಿದ್ದೇವೆ, ಇದೇ ರೀತಿಯಾದರೆ ಮುಂದಿನ ದಿನಗಳನ್ನು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕಲಬುರಗಿ ಡಿಸಿ ಕಚೇರಿ ಎದುರು ಪ್ರತಿಭಟನೆ

BJP leaders protest at sirsi

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಲಬುರಗಿ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಚಿತ ವಿದ್ಯುತ್ ಎಂಬುವುದು ಬರೀ ನಾಟಕ

ಕೊಪ್ಪಳ:ನಗರದ ಬಸವೇಶ್ವರ ವೃತ್ತದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಉಚಿತ ವಿದ್ಯುತ್ ಎಂಬುವುದು ಬರೀ ನಾಟಕ, ಕಾಂಗ್ರೆಸ್ ಸರ್ಕಾರ ಲುಚ್ಛಾ ಸರಕಾರ ಎಂದು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ | Karnataka Govt: ಬಿಜೆಪಿ ಸರ್ಕಾರದ ಅವಧಿಯ ನೇಮಕಕ್ಕೆ ಗ್ರಹಣ: ಸರ್ಕಾರಿ ವಕೀಲರ ನೇಮಕ ಅಕ್ರಮ ತನಿಖೆ

ಗ್ಯಾರಂಟಿ ಫ್ರೀ ಎಂದು ಕಂಡಿಷನ್ಸ್‌ ಹಾಕುತ್ತಿದ್ದಾರೆ

ಕೊಡಗು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಿವಿಧ ಷರತ್ತು ವಿಧಿಸಿರುವುದನ್ನು ಖಂಡಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಚುನಾವಣೆ ವೇಳೆ ಎಲ್ಲರಿಗೂ ಗ್ಯಾರಂಟಿ ಅಂತ ಹೇಳಿ ಇದೀಗ ಕಂಡಿಷನ್ಸ್‌ ಹೇರುತ್ತಿದ್ದಾರೆ. ಅಲ್ಲದೆ ಗೋ‌ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಕೈ ನಾಯಕರು ಮಾತನಾಡುತ್ತಿರುವುದು ಖಂಡನೀಯ ಎಂದು ಕಾರ್ಯಕರ್ತರು ಕಿಡಿಕಾರಿದರು.

ಇನ್ನು ಹಿಟ್ಲರ್ ಸರ್ಕಾರ ಎಂದಿದ್ದ ‌ಚಕ್ರವರ್ತಿ‌ ಸೂಲಿಬೆಲೆ ಅವರು ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಜೈಲಿಗೆ ಹೋಗಲಿದ್ದಾರೆ ಎಂಬ ಹೇಳಿಕೆ ನೀಡಿದ ಎಂ.ಬಿ.ಪಾಟೀಲ್‌ ವಿರುದ್ಧವೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

Exit mobile version