Site icon Vistara News

CM Siddaramaiah: ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ, ಸಿಎಎ ಜಾರಿ ಚುನಾವಣಾ ಗಿಮಿಕ್: ಸಿದ್ದರಾಮಯ್ಯ

BJP is afraid of losing elections says Siddaramaiah

ಉಡುಪಿ: ಪೌರತ್ವ ಕಾಯ್ದೆಯನ್ನು ಕೇವಲ ಚುನಾವಣೆಯ ದೃಷ್ಟಿಯಿಂದ ಕೇಂದ್ರ ಜಾರಿ ಮಾಡಿದ್ದು, ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿರುವುದರಿಂದ ಈ ರೀತಿಯ ಗಿಮಿಕ್‌ಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು.

ರಾಜ್ಯದಲ್ಲಿ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮುಖ್ಯಮಂತ್ರಿಗಳ ನಿಲುವೇನು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಷ್ಟು ವರ್ಷಗಳ ಕಾಲ ಈ ಬಗ್ಗೆ ಮೌನವಹಿಸಿ, ಚುನಾವಣೆಯ ಹೊಸ್ತಿಲಲ್ಲಿ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಸಿಎಎ ಜಾರಿ ಬಗ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಜಯಪ್ರಕಾಶ್ ಹೆಗ್ಡೆ ಬಂದಿರೋದು ಪಕ್ಷಕ್ಕೆ ಬಲ

ಜಯಪ್ರಕಾಶ್ ಹೆಗ್ಡೆಯವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕರಾವಳಿ ಪ್ರದೇಶದಲ್ಲಿ ಪಕ್ಷಕ್ಕೆ ಬಲ ತುಂಬಿದಂತಾಗಿದೆ ಎಂದರು.

ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ನೀಡದೇ ಯದುವೀರ್ ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಬಿಜೆಪಿ ಕೈಗೊಂಡಿರುವ ಕಾರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಆರ್.ಧ್ರುವನಾರಾಯಣ್ ಜನಪರ ರಾಜಕಾರಣಕ್ಕೆ ಮಾದರಿ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಆರ್.ಧ್ರವನಾರಾಯಣ್ ಅವರು ಮಾದರಿ ಜನನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿ ನಿರಂತರ ಪ್ರಯತ್ನ ಮಾಡಿದ್ದ ಧ್ರುವನಾರಾಯಣ್ ಅವರು ಜನರ ಮಧ್ಯ ಓಡಾಡದ ದಿನವೇ ಇಲ್ಲ. ಅವರದ್ದು ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸ್ಮರಿಸಿದರು.

ನಗರದಲ್ಲಿ ಆಯೋಜಿಸಿದ್ದ ದಿವಂಗತ ಆರ್.ಧ್ರವನಾರಾಯಣ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಧ್ರವನಾರಾಯಣ್ ಅವರ ಸಮಾಧಿಗೆ ಪುಷ್ಪಾ ನಮನ ಸಲ್ಲಿಸಿ ಸಿಎಂ ಮಾತನಾಡಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ್ ಅವರು ವಿದ್ಯಾರ್ಥಿ ಕಾಂಗ್ರೆಸ್ ಅವಧಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗುವವರೆಗೂ ಬೆಳೆದರು. ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಹೀಗಾಗಿ ಇವರ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟ ಆಗಿದೆ ಎಂದರು.

ಇದನ್ನೂ ಓದಿ | MP Pratap Simha : ಮಹಾರಾಜರ ಬಗ್ಗೆ ಲಘುವಾಗಿ ಮಾತಾಡ್ಬೇಡಿ; ಪ್ರತಾಪ್‌ಗೆ ವಿರೋಧಿ ಬಣದ ಎಚ್ಚರಿಕೆ

ಅಜಾತಶತ್ರು ಆಗಿದ್ದ ಧ್ರುವನಾರಾಯಣ್ ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಹೊಂದಿದ್ದು, ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ, ಸಹಕಾರ, ಬೆಂಬಲ ನೀಡುತ್ತೇನೆ. ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅತ್ಯಗತ್ಯ. ಧ್ರುವನಾರಾಯಣ್ ಅವರಿಗೆ ಇವೆರಡೂ ಇತ್ತು. ಸಮಾಜದ ಅಸಮಾನತೆ ಅಳಿಸಲು, ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು ಎಂದು ಸ್ಮರಿಸಿದರು.

ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಧ್ರುವನಾರಾಯಣ್ ಅಪಾರವಾದ ನಂಬಿಕೆ, ಗೌರವ ಹೊಂದಿದ್ದರು. ಈಗ ಈ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ | DA Hike: ತುಟ್ಟಿ ಭತ್ಯೆ ಶೇ. 3.75 ಏರಿಕೆ; ರಾಜ್ಯ ಸರ್ಕಾರಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೃತಜ್ಞತೆ

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ ಮಾದು, ರವಿಶಂಕರ್, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಸೇರಿ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರು, ಮುಖಂಡರು ಮತ್ತು ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

Exit mobile version