ಬೆಂಗಳೂರು: ದೇಶವನ್ನು ಭಾರತ ಎಂದು ಕರೆಯುವುದು ನಮ್ಮ ಸಂವಿಧಾನದಲ್ಲೇ ಇದೆ. ಹೀಗಿರುವಾಗ ಬಿಜೆಪಿ ಈಗ ಏಕೆ ಈ ವಿಚಾರವನ್ನು ಚರ್ಚಿಸುತ್ತಿದೆ? ಇಂಡಿಯಾ ಈಸ್ ಭಾರತ್ ಎಂದು ದೇಶದ ಸಂವಿಧಾನದಲ್ಲೇ ಹೇಳಲಾಗಿದೆ. ದೇಶವನ್ನು ಭಾರತ ಎಂದು ಕರೆಯಲು ಕಾಂಗ್ರೆಸ್ ವಿರೋಧವಿಲ್ಲ. ಇದು ಹೊಸ ವಿಚಾರವೂ ಅಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹೆಸರಿನ ವಿಚಾರಗಳನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ದೇಶದ ಮುಂದೆ ಸಾವಿರಾರು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಕೇಂದ್ರ ಬಿಜೆಪಿ ಸರ್ಕಾರ ಪರಿಹರಿಸಿದೆ ಎಂದು ಚರ್ಚಿಸಲಿ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಯ್ತು. ಇಂಡಿಯಾವನ್ನು ಭಾರತ ಅಂತ ಮರುನಾಮಕರಣ ಮಾಡಬೇಕು ಎಂಬುದರ ಬಗ್ಗೆ 9 ವರ್ಷಗಳಲ್ಲಿ ಒಂದು ಚಕಾರ ಎತ್ತಲಿಲ್ಲ. ಈಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ವಿಚಾರವನ್ನ ಬಿಜೆಪಿ ಚರ್ಚಿಸುತ್ತಿದೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ | Karnataka Politics : ಸರ್ಕಾರಕ್ಕೆ ಬಡವರ ಕಾಳಜಿ ಇದ್ದರೆ ತಕ್ಷಣ ಬರ ತಾಲೂಕು ಘೋಷಿಸಲಿ: ಬಿ.ವೈ. ವಿಜಯೇಂದ್ರ
ಉರ್ದುವಿನಲ್ಲಿ ಹಿಂದುಸ್ತಾನ ಎಂದು ಕರೆಯುತ್ತಾರೆ. ಕಾಂಗ್ರೆಸ್ ಮಿತ್ರ ಪಕ್ಷಗಳು INDIA ಎಂಬ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಭಯ ಶುರುವಾಗಿದೆ. ಇಂಡಿಯಾ ಹೆಸರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳು ಒಂದಾಗಿರುವ ಸಂದರ್ಭದಲ್ಲೇ ಬಿಜೆಪಿ ಭಾರತ ಎಂದು ಮರುನಾಮಕರಣ ಮಾಡಲು ಹೊರಟಿರುವುದರ ಹಿಂದಿನ ಅಜೇಂಡಾ ಜನರಿಗೆ ಅರ್ಥವಾಗಲಿದೆ. ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡಲು ಹೊರಟಿರೋದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.
ದೇಶದಲ್ಲಿ ತಾವು ಮಾಡಿರುವ ಕೆಲಸಗಳನ್ನು ಜನರ ಮುಂದಿಟ್ಟು ಬಿಜೆಪಿ ಚುನಾವಣೆ ಎದುರಿಸಲಿ. ದೇಶದ ಹೆಸರು ಮರುನಾಮಕರಣ ಮಾಡುವಂತ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬಿಜೆಪಿಗೆ ಶೋಭೆ ತರುವಂತದ್ದಲ್ಲ. ದೇಶದ ಅಭಿವೃದ್ಧಿ ಬಗ್ಗೆ ಬಿಜೆಪಿಗೆ ಹೇಳಲು ಏನೂ ಇಲ್ಲ. 9 ವರ್ಷದಲ್ಲಿ ದೇಶದ ಜನರು ನೆನಪಿಟ್ಟುಕೊಳ್ಳುವ ಯಾವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ.? ಪ್ರಧಾನಿಯಾಗಿ ಅವರ ಹೆಜ್ಜೆ ಗುರುತುಗಳೇನು ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ
ಉದಯನಿಧಿ ಸ್ಟಾಲಿನ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅವರೊಬ್ಬರೇ ಅಲ್ಲ. ಸನಾತನ ಪರಂಪರೆಯಲ್ಲಿ ಕೆಲವು ಆಚರಣೆಗಳನ್ನು ವಿರೋಧಿಸಿ ಹಲವು ಪ್ರಗತಿಪರರು ಹೋರಾಟ ಮಾಡಿದವರು ಇದ್ದಾರೆ. ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದವರೆಲ್ಲ ಸನಾತನದ ವಿರೋಧಿಗಳೇ ಆಗಿದ್ದರು. ಈಗ ಉದಯನಿಧಿ ಅವರ ಹೇಳಿಕೆಯನ್ನೇ ವೈಭವೀಕರಿಸುವ ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇದನ್ನೂ ಓದಿ | My Soil My Country: ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ: ಡಿ.ವಿ. ಸದಾನಂದ ಗೌಡ
ಬಸವೇಶ್ವರರು 12ನೇ ಶತಮಾನದಲ್ಲೇ ಹಿಂದು ಧರ್ಮದ ಕೆಲ ತಪ್ಪು ಆಚರಣೆಗಳನ್ನು ಸರಿಪಡಿಸುವ ಕೆಲಸ ಮಾಡಿದರು. ವೀರಶೈವ ಧರ್ಮ ಇಂದು ಹಿಂದು ಧರ್ಮದ ಅಂಗವಾಗಿದೆ. ಬಸವಣ್ಣನವರು ಅಂದು ಹಿಂದು ಧರ್ಮವನ್ನು ಸರಳೀಕರಣ ಮಾಡುವ ಕೆಲಸ ಮಾಡಿದರು. ಈ ರೀತಿಯಲ್ಲಿ ಅನೇಕರು ಅನೇಕ ರೀತಿಯಲ್ಲಿ ಈ ದೇಶದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಜನರ ಮುಂದೆ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ಭೇದಗಳನ್ನೇ ಮುಂದಿಟ್ಟುಕೊಂಡು ಹಿಂಸೆಗೆ ಪ್ರಚೋದನೆ ನೀಡುವುದು ಸರಿಯಲ್ಲ. ಅದು ನಮ್ಮ ದೇಶದ ಸಂಸ್ಕೃತಿಯೂ ಅಲ್ಲ. ಯಾವ ವಿಚಾರಗಳನ್ನ ಸ್ವೀಕರಿಸಬೇಕು, ಯಾವುದನ್ನು ಸ್ವೀಕರಿಸಬಾರದು ಎಂಬುದು ದೇಶದ ಪ್ರಜ್ಞಾವಂತ ಜನರಿಗೆ ಗೊತ್ತಿದೆ ಎಂದು ಹೇಳಿದರು.