Site icon Vistara News

ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಮಾಹಿತಿ ದೂರ ಮಾಡಿ: ಜಮಾಲ್‌ ಸಿದ್ದಿಕಿ

ಜಮಾಲ್ ಸಿದ್ದಿಕಿ

ಬೆಂಗಳೂರು:ʻ ʻʻಬಿಜೆಪಿ ಸರ್ವಸ್ಪರ್ಶಿ, ಸರ್ವವ್ಯಾಪಿ ಮತ್ತು ಸರ್ವರ ಅಭಿವೃದ್ಧಿಗೆ ಯತ್ನಿಸುವ ಪಕ್ಷ ಎಂದು ತಿಳಿಸುವ ಮೂಲಕ ಅದು ಅಲ್ಪಸಂಖ್ಯಾತರ ವಿರೋಧಿ ಎಂಬ ತಪ್ಪು ಮಾಹಿತಿಯನ್ನು ದೂರ ಮಾಡಲು ಮೋರ್ಚಾ ಯತ್ನಿಸಬೇಕು,ʼʼ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಮಾಡಿದ ಉತ್ತಮ ಕಾರ್ಯಗಳಿಂದಾಗಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ʻʻʻಅಲ್ಪಸಂಖ್ಯಾತರು ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡುವ ಬಿಜೆಪಿ ಸರಕಾರ ಕೇಂದ್ರದ್ದು. ಕ್ರಿಶ್ಚಿಯನ್, ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಡೆ ವಿದ್ಯುತ್, ಮನೆ ಮತ್ತು ರಸ್ತೆ ಸಂಪರ್ಕ ನೀಡುವುದಿಲ್ಲ ಎಂಬ ಮಾತು ಯಾವತ್ತೂ ಬಂದಿಲ್ಲ. ರೈತರಿಗೆ ನೆರವಾಗುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಬಿಜೆಪಿ ಸರಕಾರ ಜಾರಿಗೊಳಿಸಿದೆ. ಯಾವುದೇ ಯೋಜನೆಗಳಲ್ಲಿ ಭೇದ ಭಾವ ಮಾಡಿಲ್ಲ. “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್” ಘೋಷಣೆಯಂತೆ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ನಾವು ಸಮಾಜದ ಎಲ್ಲರಿಗೂ ಯೋಜನೆಗಳ ಪ್ರಯೋಜನ ತಲುಪುವಂತೆ ನೋಡಿಕೊಳ್ಳಬೇಕು,ʼʼ ಎಂದರು.

ರಾಜ್ಯ ಅಧ್ಯಕ್ಷ ಸೈಯದ್ ಸಲಾಂ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಜಮಾಲ್‌ ಸಿದ್ದಿಕಿ, ಮುಂದೆ ಅವರು ರಾಷ್ಟ್ರೀಯ ಅಧ್ಯಕ್ಷ ಆಗಲಿ ಎಂದು ಆಶಿಸಿದರು. ಬಿಜೆಪಿ ಇಂಥ ಕನಸುಗಳಿಗೆ ಅವಕಾಶ ಮಾಡಿಕೊಡುತ್ತದೆ. ಅದು ನನಸಾಗಲೂ ಅವಕಾಶವಿದೆ. ಆದರೆ, ಕುಟುಂಬ ರಾಜಕಾರಣ ಮಾಡುವ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಇಂಥ ಕನಸು ಕಾಣಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಜಾಲ ತಾಣಗಳನ್ನು ಬಳಸಿಕೊಳ್ಳಿ

ʻʻಪಕ್ಷವನ್ನು ಬಲಪಡಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮವನ್ನು ಪ್ರಚಾರಕಾರ್ಯಕ್ಕೆ ಬಳಸಿಕೊಳ್ಳಿʼʼ ಎಂದು ಅವರು ಮನವಿ ಮಾಡಿದರು. ಮತದಾರರನ್ನು ತಲುಪಲು ಮತ್ತು ಮುಖಂಡರಿಗೆ ವಿಷಯ ತಿಳಿಸಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆ ಅತ್ಯಗತ್ಯ ಎಂದು ವಿವರಿಸಿದರು. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿಗೆ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಈ ವಿಚಾರದಲ್ಲಿ ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅವರಿಗೆ ಸೂಕ್ತ ಉತ್ತರ ಕೊಡಬೇಕು. ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆ ಮತದಾನದ ಅವಧಿ 2 ಗಂಟೆ ವಿಸ್ತರಣೆಗೆ ಬಿಜೆಪಿ ಮನವಿ

Exit mobile version