ತುಮಕೂರು: ಯುಪಿಎ ಕಾಲದಲ್ಲಿ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿತ್ತು. ಎನ್‌ಡಿಎ ಸರ್ಕಾರ (BJP Jan Sankalp Yatra) ಬಂದಾಗ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಸಂಸ್ಕೃತಿ ಬದಲಿಸಿದ್ದಾರೆ. ಆದರೆ, ಕೈ ನಾಯಕರು ಅಣ್ಣ ತಮ್ಮಂದಿರ ನಡುವೆ ಜಗಳ ತಂದಿಕ್ಕಿದರು. ಜಾತಿ, ಧರ್ಮ ಒಡೆದು ಆಳುವ ನೀತಿ ಕಾಂಗ್ರೆಸ್‌ನದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಶಿರಾದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಿಂತನೆ ನಡೆಸುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ಕುಟುಂಬ ರಾಜಕೀಯ, ಒಡೆದು ಆಳುವುದಕ್ಕೆ ಕೇಂದ್ರವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರು ಜಾತಿ, ಧರ್ಮದ ಹೆಸರಲ್ಲಿ ತುಷ್ಟೀಕರಣ ಮಾಡಿದರು. ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತಿದೆ. ಕೋವಿಡ್ ಸಂಕಷ್ಟ, ನೆರೆ ಹಾವಳಿ ಸಂಕಷ್ಟದಲ್ಲೂ ದೇಶದ ಆರ್ಥಿಕತೆ ಬೆಳೆದಿದೆ. ಕರ್ನಾಟಕದಲ್ಲೂ ಎಲ್ಲ ವರ್ಗದ ಜನರ ಹಿತ ಚಿಂತನೆ ಮಾಡುವ ಸರ್ಕಾರ ಇದೆ. 30 ಸಾವಿರ ಕೋಟಿ ರೂಪಾಯಿ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಹೋಗಿದ್ದಾರೆ. ಬಿಜೆಪಿ 80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂದಿದೆ ಎಂದು ಹೇಳಿದರು.
ಇದನ್ನೂ ಓದಿ | Karnataka Election : ಈ ಸಂಕ್ರಾಂತಿ ನಂತರ ಜೆಡಿಎಸ್ ಮೇಲೆ ಆಪರೇಷನ್ ಕಾಂಗ್ರೆಸ್; ಯಾರು ಎಂದೂ ಗೊತ್ತು: ಎಚ್‌ಡಿಕೆ
ಮೋದಿ ನೇತೃತ್ವದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮುನ್ನಡೆಯುತ್ತಿದ್ದೇವೆ. ಇಂದು ಭಾರತ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ರೈತರು, ಮಹಿಳೆಯರು, ದಲಿತರು, ತುಳಿತಕ್ಕೆ ಒಳಗಾದ ಎಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಎಲ್ಲ ವರ್ಗದ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡುತ್ತಿದೆ. ಗರೀಬ್ ಕಲ್ಯಾಣ ಯೋಜನೆಯಡಿ ಅನ್ನ ನೀಡುವ ಕೆಲಸವಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನೀಡುವ ಕೆಲಸವಾಗಿದೆ. ಒಂದಲ್ಲ ಒಂದು ರೀತಿ ಕೇಂದ್ರ ಸರ್ಕಾರದ ಯೋಜನೆಗಳು ಬಡ ಜನರನ್ನು ತಲುಪುತ್ತಿವೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಓಲೈಸಲು ಮುಖ್ಯಮಂತ್ರಿಯನ್ನು ನಾಯಿ ಎಂದು ಕರೆದು ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸವನ್ನು ರಾಜ್ಯದ ಜನತೆ ಮಾಡಲಿದ್ದಾರೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿರಾ ಬರದ ನಾಡು, ಈ ತಾಲೂಕಿಗೆ ಕಾಯಕಲ್ಪ ಕೊಡಲು ಯಡಿಯೂರಪ್ಪ ಮದಲೂರು ಕೆರೆಗೆ ನೀರು ತುಂಬಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನ ಸಿಕ್ಕಿದೆ. ಇದಕ್ಕೆ 13 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಲಿದೆ. ಈ ಭಾಗದ ಕೆರೆಗಳನ್ನು ತುಂಬಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದು, ಹತ್ತು ಹಲವಾರು ಯೋಜನೆಗಳನ್ನು ಕೊಟ್ಟಿದ್ದಾರೆ. 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನೀಡಿದ್ದಾರೆ. ಅದನ್ನು ಮನಮೋಹನ್ ಸಿಂಗ್ ಕೊಟ್ಟರೇ ಎಂದು ಪ್ರಶ್ನಿಸಿದ ಅವರು, ರೈತ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಬಂದಿದೆ. ಬಿಜೆಪಿಯು ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಕೊಟ್ಟಿದೆ ಎಂದ ಅವರು, ಸೋನಿಯಾ ಗಾಂಧಿ ಮನೆ ಬಾಗಿಲನ್ನು ಕಾದು ವಾಪಸ್ ಬರುತ್ತಿದ್ದ ಹಾಗೂ ರಾಹುಲ್ ಗಾಂಧಿ ಮುಂದೆ ಕೈ ಕಟ್ಟಿ ನಿಲ್ಲುತ್ತಿದ್ದವರಿಂದ ಪಾಠ ಕಲಿಯೋ ಅವಶ್ಯಕತೆ ನಮಗೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಜನರು ಏನು ಬೇಕಾದರೂ ಮಾಡಬಹುದು. ಯಾರನ್ನು ಹುಲಿ ಮಾಡಬೇಕು, ಯಾರನ್ನು ಇಲಿ ಮಾಡಬೇಕು ಎಂಬುವುದು ಕರ್ನಾಟಕದ ಏಳು ಕೋಟಿ ಕನ್ನಡಿಗರ ಕೈಯಲ್ಲಿದೆ. ತಾವು ಹುಲಿ, ಉಳಿದವರು ನಾಯಿ, ನರಿ ಎಂದು ಭಾವಿಸುವುವವರ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ತುಮಕೂರು ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಮಲ ಅರಳುತ್ತದೆ. ನಡ್ಡಾ ಅವರ ಕಾಲ್ಗುಣದಿಂದ ಕಮಲ ಅರಳಲಿದೆ. ಶಿರಾ ಎಂದರೆ ಸಿಹಿ, ಇಲ್ಲಿಂದಲೇ ಇಡೀ ರಾಜ್ಯಕ್ಕೆ ಸಿಹಿ ಹಂಚೋಣ ಎಂದು ಕರೆ ನೀಡಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಮುಖಂಡರನ್ನು ಒಂದೇ ಪ್ರಶ್ನೆ ಕೇಳುವೆ, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನೀವು ಏನೇನು ಕೊಡುಗೆ ಕೊಟ್ಟಿದ್ದೀರಾ ಎಂಬ ಪಟ್ಟಿ ಬಿಡುಗಡೆ ಮಾಡಿ, ನಾನು ಮತ್ತು ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನಾಡಿಗೆ ಏನು ಕೊಡುಗೆ ಕೊಟ್ಟಿದ್ದೇವೆ ಎಂಬ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಂತರ ರಾಜ್ಯದ ಜನರು ತೀರ್ಮಾನ ಮಾಡಲಿದ್ದಾರೆ. ಜನ ಅಭಿವೃದ್ಧಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ 140-150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ರೈತರಿಗಾಗಿ ನಾವು ಎಲ್ಲವನ್ನೂ ಮಾಡಿದ್ದೇವೆ. ಕೊಟ್ಟ ಮಾತಿನಂತೆ ಕೆರೆಗಳನ್ನು ತುಂಬಿಸಿದ್ದೇವೆ. ಬಿಜೆಪಿ ಕೊಟ್ಟ ಭರವಸೆ ಈಡೇರಿಸುವ
ಪಕ್ಷವಾಗಿದೆ. ಬುಡಕಟ್ಟು ಸಮುದಾಯದ ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಪಕ್ಷ ಮಾಡಿದೆ. ರಾಜ್ಯದಲ್ಲಿ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದೆ ಎಂದರು.
ನಾವು ಯಾವ ನೀರಾವರಿ ಯೋಜನೆಯನ್ನೂ ಕೈಬಿಟ್ಟಿಲ್ಲ. ಮಹಾದಾಯಿ ಯೋಜನೆ ಅನುಷ್ಠಾನ ಮಾಡಲಿದ್ದೇವೆ, ರಾಜ್ಯದ ಎಲ್ಲ ಹೆದ್ದಾರಿಗಳು ಹೇಗೆ ಮಾರ್ಪಾಡಾಗಿದೆ ಎಂದು ನೀವು ನೋಡಿದ್ದೀರಾ ಎಂದ ಅವರು, ಪ್ರಧಾನಿಯವರ ಆಶಯದಂತೆ ಮನೆಮನೆಗೆ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸವಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಲಾಗಿದೆ. ಕೋವಿಡ್ ನಡುವೆಯೂ ಬೆಳಗಾವಿ ಅಧಿವೇಶನ ನಡೆಸಿರುವುದು, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಂಕಲ್ಪ, ವಿವಿಧ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಹಣ ಮೀಸಲು ಮಾಡಿ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಬಿಜೆಪಿ ಮತ್ತೊಮ್ಮೆ 140 ಸ್ಥಾನ ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಇದನ್ನೂ ಓದಿ | Karnataka Election : ಕಾಂಗ್ರೆಸ್‌ನವರನ್ನು ಟೀಕಿಸಿ ಸಮಯ ಹಾಳು ಮಾಡಲಾರೆ; ನಮ್ಮಿಂದ ಬಡತನದ ಪ್ರಮಾಣ ತಗ್ಗಿದೆ: ಜೆ.ಪಿ. ನಡ್ಡಾ