ದೊಡ್ಡ ಬಳ್ಳಾಪುರ: ಇಲ್ಲಿನ ರಘುನಾಥಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ ಎಂದು ವೇದಿಕೆಯಲ್ಲಿ ಮಾತನಾಡಿದ ಗಣ್ಯರು ಹೇಳಿಕೊಂಡರು. ಐದು ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದೂ ನಿಜ. ಆದರೆ, ಕಾರ್ಯಕ್ರಮದ ಬಹುತೇಕ ಸಂದರ್ಭದಲ್ಲಿ ಸಭಾಂಗಣ ಪೂರ್ಣವಾಗಿ ತುಂಬಿರಲಿಲ್ಲ ಎಂಬಂತೆ ಕಂಡುಬಂದಿದೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಷಣ ಮಾಡುವ ವೇಳೆಗೆ ಹಿಂಬದಿಯ ಕುರ್ಚಿಗಳೆಲ್ಲ ಖಾಲಿಯಾಗಿದ್ದವು.
ಸುಧಾಕರ್, ಬಿಎಸ್‌ವೈ ಭಾಷಣದ ವೇಳೆ ತುಂಬಿತ್ತು
ನಿಜವೆಂದರೆ, ಆರಂಭದಲ್ಲಿ ಸಾಕಷ್ಟು ಜನ ಸಭಾಂಗಣವನ್ನು ತುಂಬಿದ್ದರು. ಆರಂಭದಲ್ಲಿ ಎದುರು ಭಾಗವೇ ಖಾಲಿ ಇರುವುದನ್ನು ಗಮನಿಸಿದ ಸಂಘಟಕರು ಹೊಸದಾಗಿ ಬರುವವರನ್ನು ನೇರವಾಗಿ ಮುಂದೆ ಕಳುಹಿಸುವಂತೆ ಮನವಿ ಮಾಡಿದರು. ಹಾಗೆ ಅಲ್ಲೆಲ್ಲ ತುಂಬಿಕೊಂಡಿತು. ವಿಜಯ ಪ್ರಕಾಶ್ ಸಂಗೀತದ ವೇಳೆ ಜನ ಕಿಕ್ಕಿರಿದಿದ್ದರು. ಬಿಜೆಪಿ ನಾಯಕರೆಲ್ಲ ಆಗಮಿಸಿದಾಗಲೂ ಸಂದಣಿ ಇತ್ತು.
ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಸಚಿವ ಡಾ. ಕೆ. ಸುಧಾಕರ್ ಭಾಷಣ ಮಾಡುವಾಗಲಂತೂ ತುಸು ಹೆಚ್ಚೇ ಇತ್ತು. ಆದರೆ, ಯಾವಾಗ ಮಾಜಿ ಸಿಎಂ ಯಡಿಯೂರಪ್ಪ ಅವರು ಭಾಷಣ ಮುಗಿಸಿದರೋ ಆ ಬಳಿಕ ಕುರ್ಚಿಗಳು ಖಾಲಿಯಾಗತೊಡಗಿದವು. ಅಷ್ಟು ಹೊತ್ತಿಗೆ ಊಟದ ಹೊತ್ತೂ ಆಗಿದ್ದರಿಂದ ಸಾಕಷ್ಟು ಮಂದಿ ಅತ್ತ ಹೋಗಿದ್ದರಿಂದ ಸಭಾಂಗಣ ಖಾಲಿ ಹೊಡೆಯುತ್ತಿತ್ತು. ಸಿ.ಟಿ. ರವಿ ಅವರ ಭಾಷಣಕ್ಕೂ ಅಷ್ಟೊಂದು ಜನ ಇರಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣಕ್ಕೆ ಪ್ರೇಕ್ಷಕರ ಸಂಖ್ಯೆ ಭಾರಿ ಕಡಿಮೆ ಇತ್ತು.
ನಿರೀಕ್ಷೆಗೂ ಮೀರಿದ ಜನ: ಸುಧಾಕರ್ ಸಂತಸ
ʻʻಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ 7ರಿಂದ ಎಂಟು ಕಿಲೋ ಮೀಟರ್ ದೇವನಹಳ್ಳಿ ಯವರೆಗೂ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಹೆಚ್.ಕ್ರಾಸ್ ವರೆಗೂ ಜಾಮ್ ಆಗಿದೆಯಂತೆ. ಕೋಲಾರ ಚಿಕ್ಕಬಳ್ಳಾಪುರ ಭಾಗದಲ್ಲೂ ಟ್ರಾಫಿಕ್ ಜಾಮ್ ಆಗಿದೆ. ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ. ಆದ್ದರಿಂದ ಇನ್ನು ಒಂದು ಲಕ್ಷ ಜನ ಹೊರಗಡೆ ಇದ್ದಾರೆʼʼ ಎಂದು ಸಮಾರಂಭದ ನಡುವೆ ಸಚಿವ ಸುಧಾಕರ್ ಹೇಳಿದರು.