ದೊಡ್ಡಬಳ್ಳಾಪುರ: ಇಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ನಾಯಕರಾದ ಎಂ.ಟಿ.ಬಿ. ನಾಗರಾಜ್, ಮುನಿರತ್ನ ಮತ್ತಿತರ ನಾಯಕರು ನೃತ್ಯ ಕೈ ಪಾಳಯದ ಕಣ್ಣು ಕುಕ್ಕಿದೆ.
ಕಾರ್ಯಕ್ರಮದಲ್ಲಿ ಅವರು ನೃತ್ಯ ಮಾಡಿದ್ದನ್ನು ನೋಡಿದ ಕೂಡಲೇ ಟ್ವೀಟ್ ಮಾಡಿರುವ ಕೆಪಿಸಿಸಿ ಯಾವ ಕಾರಣಕ್ಕೆ ಈ ಸಂಭ್ರಮಾಚರಣೆ, ಕುಣಿತ ಎಂದು ಪ್ರಶ್ನಿಸಿದೆ. ಸಭಾ ಕಾರ್ಯಕ್ರಮ ಆರಂಭಕ್ಕೆ ಮೊದಲು ವಿಜಯ ಪ್ರಕಾಶ್ ಅವರ ನೇತೃತ್ವದಲ್ಲಿ ಸಂಗೀತ ಸಂಭ್ರಮವಿತ್ತು. ಅದರಲ್ಲಿ ಸತ್ಯಹರಿಶ್ಚಂದ್ರ ಸಿನಿಮಾದ ʻಕುಲದಲ್ಲಿ ಕೀಳ್ಯಾವುದೋʼ ಎಂಬ ಹಾಡು ಹಾಡಿದಾಗ ಜೋಷ್ ತಂದುಕೊಂಡ ಸಚಿವ ಎಂ.ಟಿ.ಬಿ. ನಾಗರಾಜ್ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ವೇದಿಕೆ ಮೇಲೆ ನೃತ್ಯ ಆರಂಭಿಸಿದರು. ಇಬ್ಬರೂ ಜುಗಲ್‌ಬಂದಿಯಲ್ಲಿ ಸಂಪೂರ್ಣ ಹಾಡಿಗೆ ನರ್ತಿಸಿದರು. ಮತ್ತೊಬ್ಬ ಸಚಿವ ಮುನಿರತ್ನ ಸುಮ್ಮನೆ ನಿಂತಿದ್ದರು.
ʻʻರಾಜ್ಯದಲ್ಲಿ ಮಳೆಯ ರುದ್ರನರ್ತನೆ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ! ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ. ಇದು ಬಿಜೆಪಿ ಸರಕಾರದ ಲಜ್ಜೆಗೇಡಿ ವರ್ತನೆʼʼ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ? ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ? 40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ? ಎಂದು ಕೇಳಿದೆ.
ಇದನ್ನೂ ಓದಿ | BJP ಜನಸ್ಪಂದನ | ಅಣ್ಣಾವ್ರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ MTB, ವಿಶ್ವನಾಥ್ !