ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾದ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಬಿಜೆಪಿಗೆ ದೊಡ್ಡ ಮಟ್ಟದ ಅಸ್ತಿತ್ವವಿಲ್ಲದ ಆ ಭಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಮಾವೇಶವೇ ನಡೆದಿದೆ. ಆದರೆ, ಇದರಲ್ಲಿ ಭಾಗವಹಿಸಲೇಬೇಕಾಗಿದ್ದ ಹಲವು ಹಿರಿಯ ನಾಯಕರು ಕಾರ್ಯಕ್ರಮದಿಂದ ದೂರ ಉಳಿದಿರುವುದೇಕೆ ಎಂಬ ಪ್ರಶ್ನೆ ಕಾಡಿದೆ. ಹೀಗಾಗಿ ದೊಡ್ಡ ಯಶಸ್ಸಿನ ಸಮಾವೇಶದ ನಂತರವು ಕೊರೆಯುವ ಹುಳವೊಂದು ಬಿಜೆಪಿಯ ತಲೆ ಹೊಕ್ಕಂತಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.
ಕಾರಣ ನೀಡಿ ಬಾರದೆ ಇರುವವರು
ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಹಾಲಪ್ಪ ಆಚಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಅವರು ಭಾಗವಹಿಸಿಲ್ಲ. ಅದಕ್ಕೆ ಅವರು ಸಕಾರಣಗಳನ್ನು ಕೊಟ್ಟಿದ್ದಾರೆ. ಸಚಿವ ಸೋಮಣ್ಣ ಅವರು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿದ್ದರೆ, ಮುರುಗೇಶ ನಿರಾಣಿ ಅವರು ಅಮೆರಿಕ ಹೂಡಿಕೆ ಸಮಾವೇಶದ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದರಿಂದ ಸಚಿವ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾವೇಶಕ್ಕೆ ಬಂದಿಲ್ಲ. ಹಾಲಪ್ಪ ಆಚಾರ್ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗಣಿ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿದ್ದರೆ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಪೂರ್ವ ನಿಗದಿತ ಕಾರ್ಯಕ್ರಮದ ಕಾರಣ ಬರಲಾಗುತ್ತಿಲ್ಲ ಎಂದಿ ಮೊದಲೇ ತಿಳಿಸಿದ್ದರು.
ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೈದರಾಬಾದ್‌ಲ್ಲಿರುವ ರಾಷ್ಟ್ರೀಯ ಗಣಿ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ಇರುವುದರಿಂದ ಸಮಾರಂಭಕ್ಕೆ ಬರುತ್ತಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರಿಗೂ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದುವಂತೆ.
ಗಮನ ಸೆಳೆದ ಶೆಟ್ಟರ್, ಈಶ್ವರಪ್ಪ ಗೈರು
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರ ಗೈರು ಎಲ್ಲರ ಗಮನ ಸೆಳೆದಿದೆ. ಬಸವರಾಜ ಬೊಮ್ಮಾಯಿ ನಾಯಕತ್ವವನ್ನು ಪ್ರಾರಂಭದಲ್ಲೇ ವಿರೋಧಿಸಿದ್ದವರು ಶೆಟ್ಟರ್. ಅದೇ ವಿಚಾರವಾಗಿ ದೂರ ಉಳಿದರಾ ಎಂಬ ಚರ್ಚೆ ನಡೆಯುತ್ತಿದೆ. ಪೂರ್ವ ನಿಗದಿತ ಕಾರ್ಯಕ್ರಮದ ನೆಪದಲ್ಲಿ ಸಾಧನ ಸಮಾವೇಶದಿಂದ ದೂರ ಉಳಿದಿರುವ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಕೂಡಾ ಶೆಟ್ಟರ್ ಅವರ ಆತ್ಮೀಯರೆ. ಅವರನ್ನು ಸಂಪುಟಕ್ಕೆ ಸೇರಿಸಿದ್ದು ಕೂಡಾ ಶೆಟ್ಟರ್ ಅವರೇ ಎಂದು ಹೇಳಲಾಗುತ್ತಿದೆ. ಇನ್ನು ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬೆಳಗ್ಗಿನವರೆಗೂ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಇತ್ತು ಎಂಬ ಕಾರಣವನ್ನು ನೀಡುವ ಸಾಧ್ಯತೆ ಇದೆ.
ವಿ. ಸೋಮಣ್ಣ ಅವರಿಗೆ ಸಾಧನಾ ಸಮಾವೇಶಕ್ಕಿಂತಲೂ ಜಿಲ್ಲಾ ಪ್ರವಾಸವೇ ಮುಖ್ಯವಾಯಿತಾ ಎಂಬ ಪ್ರಶ್ನೆಯೂ ಎದುರಾಗಿದೆ. ಅಥವಾ ಪರೋಕ್ಷವಾಗಿ ಕಾರ್ಯಕ್ರಮದ ಉಸ್ತುವಾರಿ, ಸಚಿವ ಕೆ. ಸುಧಾಕರ್ ಮೇಲಿನ ಮುನಿಸಿನಿಂದ ಏನಾದರೂ ಗೈರು ಆದರಾ ಸೋಮಣ್ಣ ಎನ್ನುವುದು ಈಗಿರುವ ಚರ್ಚೆ.
ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳನ್ನು ಒಳಗೊಂಡ ಸಮಾವೇಶ ಇದು. ಹಾಗಿದ್ದರೂ ಬೆಂಗಳೂರು ನಗರದ ಶಾಸಕರಾದ ಸತೀಶ್ ರೆಡ್ಢಿ, ಅರವಿಂದ ಲಿಂಬಾವಳಿ, ಎಂ ಕೃಷ್ಣಪ್ಪ ಸಮಾವೇಶಕ್ಕ ಬಂದಿಲ್ಲ. ಇವರೆಲ್ಲ ಯಾಕೆ ಬಂದಿಲ್ಲ ಎನ್ನುವುದಕ್ಕೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ, ಅನುಮಾನಗಳಂತೂ ಹುಟ್ಟಿಕೊಂಡಿವೆ.