ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನದ ಭೀತಿ ಹಿನ್ನೆಲೆಯಲ್ಲಿ ಶಾಸಕರನ್ನು ರೇಸಾರ್ಟ್‌ಗೆ ಶಿಫ್ಟ್ ಮಾಡಲು ಕೈ ಪಡೆ ಮುಂದಾಗಿದೆ. ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೂ ಅಡ್ಡ ಮತದಾನ ಭೀತಿ ಕಾಡುತ್ತಿದೆ. ಹೀಗಾಗಿ ಒಂದೆಡೆ ಪಕ್ಷೇತರ ಶಾಸಕರ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿರುವುದು ಕಂಡುಬಂದಿದೆ.
ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರನ್ನು ಕಾಂಗ್ರೆಸ್ ನಾಯಕರೊಬ್ಬರು ಭೇಟಿಯಾಗಿ, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶರಣಗೌಡ ಕಂದಕೂರು ಖಚಿತಪಡಿಸಿದ್ದಾರೆ.
ಇನ್ನು ಪಕ್ಷೇತರ ಶಾಸಕರಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ಆಮಿಷ ಒಡ್ಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿ, ಕುಪೇಂದ್ರರೆಡ್ಡಿ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ಯಾವುದೇ ಆಮಿಷ ಒಡ್ಡಿಲ್ಲ ಎಂದು ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಶಾಸಕ ಶರಣಗೌಡ ಕಂದಕೂರು ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಎಲ್ಲರೂ ಸಂಪರ್ಕ ಮಾಡುವುದು ಸ್ವಾಭಾವಿಕ. ಚುನಾವಣೆ ಬಂದಾಗ ಸಹಜವಾಗಿ ಒಂದು ಪಕ್ಷದವರು ಮತ್ತೊಂದು ಪಕ್ಷದವರನ್ನು ಸಂಪರ್ಕ ಮಾಡುತ್ತಾರೆ. ಸಂಪರ್ಕ ಮಾಡಿದವರ ಹೆಸರು ಬಹಿರಂಗ ಪಡಿಸಲ್ಲ. ಕಾಂಗ್ರೆಸ್‌ನವರು ಸಂಪರ್ಕ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ | Rajya sabha Election: ಕಾಂಗ್ರೆಸ್‌ನಿಂದ ರೆಸಾರ್ಟ್ ಪಾಲಿಟಿಕ್ಸ್; ಹೆಚ್ಚುವರಿ ಬಟ್ಟೆ ಜತೆ ಬರುವಂತೆ ಶಾಸಕರಿಗೆ ಡಿಕೆಶಿ ಪತ್ರ
ಅಡ್ಡ ಮತದಾನ ಭೀತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಡ್ಡ ಮತದಾನ ಆಗಬಹುದು. ಚುನಾವಣೆಯಲ್ಲಿ
ಅಡ್ಡಮತದಾನ ಸಹಜ ಪ್ರಕ್ರಿಯೆ. ಬಹಳ ದಿನಗಳ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಫೋನ್ ಮಾಡಿದ್ದರು. ಬನ್ನಿ ಎಂದಿದ್ದಾರೆ ಬರುತ್ತೇನೆಂದು ಹೇಳಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅವರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ನಾನು ಯಾರಿಗೆ ಬೆಂಬಲಿಸಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ. ನಾನು ಹಿರಿಯರ ಅಭಿಪ್ರಾಯ ಪಡೆದು ಯಾರಿಗೆ ಬೆಂಬಲಿಸಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಅಮಿಷವೊಡ್ಡಿಲ್ಲ, ಮತ ಕೇಳಿದ್ದಾರೆ: ದರ್ಶನ್ ಪುಟ್ಟಣಯ್ಯ
ಈ ಬಗ್ಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿ, ರಾಜ್ಯಸಭೆ ಚುನಾವಣೆ ಸಂಬಂಧ ನನಗೆ ಯಾರೂ ಬೆದರಿಕೆ ಹಾಕಿಲ್ಲ. ಯಾವುದೇ ಆಮಿಷ ಒಡ್ಡಿಲ್ಲ. ಕುಪೇಂದ್ರರೆಡ್ಡಿ ನನ್ನ ಸಂಪರ್ಕಿಸಿದ್ದು ನಿಜ, ಆದರೆ, ಯಾವುದೇ ಆಮಿಷ ಒಡ್ಡಿಲ್ಲ. ದೂರು ಯಾಕೆ ಕೊಟ್ಟಿದ್ದಾರೊ ಗೊತ್ತಿಲ್ಲ. ಇದೆಲ್ಲಾ ಹೈಡ್ರಾಮವಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಎರಡು ಚುನಾವಣೆಯಲ್ಲಿ ಅಭ್ಯರ್ಥಿ ಹಾಕದೆ ಕಾಂಗ್ರೆಸ್ ನೆರವು ನೀಡಿದೆ. ಈಗ ಅವರ ಪರವಾಗಿ ನಿಲ್ಲಬೇಕಾಗಿರುವುದು ನನ್ನ ಕರ್ತವ್ಯ. ಕಳೆದ ಲೋಕಸಭೆ ಚುನಾವಣೆಯಲ್ಲಿ ರೈತ ಸಂಘ ಸುಮಲತಾ ಪರವಾಗಿ ಚುನಾವಣೆ ಮಾಡಿತ್ತು. ಈಗಿನ ಚುನಾವಣೆಯಲ್ಲಿ ಏನು ಮಾಡುತ್ತೇವೆ ಅನ್ನೋದು ನಾನು ಹೇಳದೆಯೇ ನಿಮಗೆ ಗೊತ್ತಾಗುತ್ತದೆ. ಆದರೂ ರೈತ ಸಂಘದ ಹಿರಿಯರು ಅದರ ಬಗ್ಗೆ ಮಾತನಾಡುತ್ತಾರೆ. ಅನುದಾನ ವಾಪಸ್ ಹೋಗಿತ್ತು, ಆದರೆ ಅದನ್ನು ನಾವು ವಾಪಸ್ಸು ತಂದಿದ್ದೇವೆ. ಈಗಿನ ಸರ್ಕಾರ ಅನುದಾನ ಇನ್ನು ಕೊಟ್ಟಿಲ್ಲ. ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ | CM Siddaramaiah: ಜೆಡಿಎಸ್ ಕೋಟೆಯಲ್ಲಿ ದೇವೇಗೌಡರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ಎನ್‌ಡಿಎ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ವಿರುದ್ಧ ಪ್ರಕರಣ
ಮತ ಹಾಕುವಂತೆ ಪಕ್ಷೇತರ ಶಾಸಕರಾದ ಎಚ್.ಎಸ್. ಪುಟ್ಟಸ್ವಾಮಿಗೌಡ, ಲತಾ ಮಲ್ಲಿಕಾರ್ಜುನ ಹಾಗೂ ದರ್ಶನ್ ಪುಟ್ಟಣ್ಣಯ್ಯಗೆ ಆಮಿಷ ಒಡ್ಡಿರುವ ರಾಜ್ಯಸಭೆ ಎನ್‌ಡಿಎ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ನೀಡಿದ ದೂರಿನ ಮೇರೆಗೆ ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.