ಬೆಂಗಳೂರು: “ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದರು.
ವೇದಿಕೆ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಕಹಳೆ ಮೊಳಗಿಸಿದರು, ಈ ವೇಳೆ ಮೈತ್ರಿ ನಾಯಕರು ಕೈ ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪಾದಯಾತ್ರೆ ಆರಂಭ ಮಾಡಿದರು. ಪಾದಯಾತ್ರೆ ಆರಂಭದಲ್ಲಿ ಸಣ್ಣ ಪ್ರಮಾಣದ ಮಳೆ ಶುರುವಾಯಿತು. ಮಳೆ ನಡುವೆ ಹೆಜ್ಜೆ ಹಾಕುತ್ತಾ ಮೈತ್ರಿ ನಾಯಕರು, ಮುಖಂಡರು ಮುಂದೆ ಸಾಗಿದರು.
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಿಸುತ್ತಿದ್ದೇವೆ. ದಲಿತರಿಗೆ ನ್ಯಾಯ ಸಿಗಬೇಕು, ಉತ್ತಮ ಮಳೆ ಬೆಳೆಯಾಗಿ ರೈತರು ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಕೆಂಪಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಇರುವ ಭ್ರಷ್ಟಾ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ, ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ ಎಂದು ಹೇಳಿದ್ದರು. ಅಹಿಂದ ಹೆಸರೇಳಿಕೊಂಡ ಬಂದ ಸರ್ಕಾರ ಇಂದು ಅವರಿಗೆ ಅನ್ಯಾಯ ಮಾಡುತ್ತಿದೆ. ಮುಡಾದಲ್ಲಿ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ 5 ಸಾವಿರ ಅರ್ಜಿಗಳು ಬಂದಿವೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಹೈಕಮಾಂಡ್‌ಗೆ ಹಣ ಕಳಿಸಲು ಕಾಂಗ್ರೆಸ್ ಸರ್ಕಾರ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾವು ಹೇಳಿದ್ದೆವು. ಸಾವಿರಾರು ಕೋಟಿ ಅಕ್ರಮ ಮುಡಾದಲ್ಲಿ ಆಗಿದೆ ಎಂದು ಅಧ್ಯಕ್ಷ ಮರಿಗೌಡ ಹೇಳಿದ್ದಾರೆ. ಹೀಗಾಗಿ ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಆಗಿದೆ. ಸಿಎಂ, ಡಿಸಿಎಂಗೆ ಸವಾಲು ಹಾಕುತ್ತೇನೆ. ನಿಮಗೆ ಧೈರ್ಯ ಇದ್ದರೆ, ನಮ್ಮ ತಪ್ಪಿದ್ದರೆ ಹೊರ ತೆಗೆಯಿರಿ ಎಂದು ಸವಾಲು ಹಾಕಿದರು.
ವಿಪಕ್ಷ ನಾಯಕ ಆರ್. ಆಶೋಕ್ ಮಾತನಾಡಿ, ಯಾವ ಕಾರಣಕ್ಕೆ ಪಾದಯಾತ್ರೆ ಅಂತ ಕೇಳುತ್ತಿದ್ದಾರೆ. ನಮಗೆ ಅಧಿಕಾರ ಕೊಟ್ಟಿರುವುದು, ಯಾರು ತಪ್ಪು ಮಾಡುತ್ತಾರೋ ಅವರನ್ನು ಜೈಲಿಗೆ ಹಾಕುವುದಕ್ಕೆ. ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿಲ್ಲವಾ? ಜೈಲಿಗೆ ಹೋಗಲಿಲ್ಲವಾ? ರಾಜ್ಯಪಾಲರ ನೋಟಿಸ್‌ಗೆ ಸಿಎಂ ಸಿದ್ದರಾಮಯ್ಯ ಗಢಗಢ ನಡುಗುತ್ತಿದ್ದಾರೆ. ಇನ್ನೂ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟರೆ ಇವರ ಪರಿಸ್ಥಿತಿ ಏನು. ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಎಂದರು.
ಇದನ್ನೂ ಓದಿ | HD Kumaraswamy: ಇನ್ನೂ ಹತ್ತು ತಿಂಗಳು ಸರ್ಕಾರ ನಡೆಸಿ ನೋಡೋಣ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲ್
ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ-ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.