ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಜಿಲ್ಲಾ ಕೋರ್ ಕಮಿಟಿಗಳಿಂದ ದಿನಪೂರ್ತಿ ಅಭಿಪ್ರಾಯ ಸಂಗ್ರಹ ನಡೆಯಿತು. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ರಾಜ್ಯ, ರಾಷ್ಟ್ರೀಯ ನಾಯಕರು ಸಭೆಗಳಲ್ಲಿ ಭಾಗವಹಿಸಿದರು.
ಕೋಲಾರ ಜಿಲ್ಲೆ
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ನಡೆಯಿತು. ಕೋಲಾರ ಕ್ಷೇತ್ರದಲ್ಲಿ ಹೆಚ್ಚು ಫೋಕಸ್ ಮಾಡುವಂತೆ ಜಿಲ್ಲಾ ಕೋರ್ ಕಮಿಟಿ ಅಭಿಪ್ರಾಯಪಟ್ಟಿದೆ. ಕೋಲಾರದಲ್ಲಿ ಬಿಜೆಪಿಯಿಂದ ವರ್ತೂರು ಪ್ರಕಾಶ್ ಜತೆ ಇನ್ನಿಬ್ಬರು ಆಕಾಂಕ್ಷಿಗಳ ಹೆಸರು ಪ್ರಸ್ತಾಪ ಆಗಿದೆ. ಹೆಚ್ಚಿನ ಸದಸ್ಯರು ವರ್ತೂರ್ ಪ್ರಕಾಶ್ ಪರವಾಗಿಯೇ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೈಸೂರು ಜಿಲ್ಲೆ
ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಿತು. ವರುಣ ಕ್ಷೇತ್ರದ ಅಕಾಂಕ್ಷಿಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ, ವರುಣ ಕ್ಷೇತ್ರಕ್ಕೆ ಇಂದು ಒಟ್ಟು 5 ಆಕಾಂಕ್ಷಿಗಳ ಹೆಸರು ಉಲ್ಲೇಖ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವರುಣದಿಂದ ಸ್ಫರ್ಧೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಸಿದ್ದರಾಮಯ್ಯ ಮತ್ತೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಪ್ರಬಲವಾದ ಅಭ್ಯರ್ಥಿ ಕೊಡಬೇಕು. ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಅವರಂತಹವರಿಂದ ಪ್ರಚಾರ ಮಾಡಿದರೆ ಕ್ಷೇತ್ರದಲ್ಲಿ ಹೆಚ್ಚು ಅನುಕೂಲ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಶಕ್ತಿ ಇದೆ. ಎಲ್ಲರೂ ಒಪ್ಪುವ ಮತ್ತು ಸಂಘಟನೆ ಒಪ್ಪುವ ಅಭ್ಯರ್ಥಿಯನ್ನು ಕೊಟ್ಟರೆ ನಾವು ಕೆಲಸ ಮಾಡಲು ಸುಲಭ. ಪಕ್ಷ ಸೂಕ್ತ ಅಭ್ಯರ್ಥಿ ವಿಚಾರದಲ್ಲಿ ಗಮನ ಹರಿಸಬೇಕು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ
ಸಭೆಯಲ್ಲಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಚಿವ ವಿ. ಸೋಮಣ್ಣ ಹೆಸರು ಕೂಡಾ ಪ್ರಸ್ತಾಪ ಆಗಿದೆ. ಚಾಮರಾಜನಗರ ಕ್ಷೇತ್ರಕ್ಕೆ 5 ಆಕಾಂಕ್ಷಿಗಳ ಹೆಸರು ಇರುವುದನ್ನು ಸಭೆಯಲ್ಲಿ ತಿಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸೇರಿದಂತೆ ತಲಾ 2 ಆಕಾಂಕ್ಷಿಗಳ ಹೆಸರು ಇದೆ ಎಂದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಹೊಸಕೋಟೆ ಕ್ಷೇತ್ರದಲ್ಲಿ ಪುತ್ರ ನಿತೀಶ್ ಪುರುಷೊತ್ತಮ್ ಗೆ ಸಚಿವ ಎಂಟಿಬಿ ನಾಗರಾಜು ಟಿಕೆಟ್ ಕೇಳಿದ್ದಾರೆ. ಹೊಸಕೋಟೆಗೆ ಎಂಟಿಬಿ, ಪುತ್ರ ನಿತೀಶ್ – ಎರಡೂ ಹೆಸರುಗಳನ್ನು ಕಳಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿ ಧೀರಜ್ ಮುನಿರಾಜುಗೆ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಕಳೆದ ವರ್ಷ ಚಿಕ್ಕಬಳ್ಳಾಪುರ ಜನಸ್ಪಂದನ ಸಮಾವೇಶದ ಆಯೋಜನೆಯ ಹೊಣೆಯನ್ನು ಸಚಿವ ಸುಧಾಕರ್ ಜತೆಗೂಡಿ ಧೀರಜ್ ಮುನಿರಾಜು ಹೊತ್ತಿದ್ದರು. ಆಗ ಧೀರಜ್ ನಿವಾಸಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಯಡಿಯೂರಪ್ಪ, ಸಿಎಂ, ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಹ ಭೇಟಿ ನೀಡಿದ್ದರು.
ದೇವನಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪಗೆ ಟಿಕೆಟ್ ನಿಗದಿ ಎನ್ನಲಾಗುತ್ತಿದೆ. ಜೆಡಿಎಸ್ ತೊರೆದು ಬಿಜೆಪಿಗೆ ಬಂದಿರುವ ಪಿಳ್ಳ ಮುನಿಶಾಮಪ್ಪ ಅವರ ಜತೆಗೆ ನೆಲಮಂಗಲ ಕ್ಷೇತ್ರದಲ್ಲಿ ಆಕಾಂಕ್ಷಿ ಸಪ್ತಗಿರಿ ಶಂಕರ್ ನಾಯಕ್‌ಗೆ ಟಿಕೆಟ್ ಸಾಧ್ಯತೆ ಎನ್ನಲಾಗಿದೆ.
ರಾಮನಗರ ಜಿಲ್ಲೆ
ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ನಾಲ್ಕು ಕ್ಷೇತ್ರಗಳಿಗೆ ಒಂದೊಂದು ಅಭ್ಯರ್ಥಿಗಳ ಹೆಸರಿನ ಬಗ್ಗೆ ಚರ್ಚೆ ನಡೆದಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರಾಮನಗರ ಕ್ಷೇತ್ರಕ್ಕೆ ಗೌತಮ್ ಗೌಡ, ಮಾಗಡಿ ಕ್ಷೇತ್ರಕ್ಕೆ ಪ್ರಸಾದ್ ಗೌಡ ಮತ್ತು ಕನಕಪುರ ಕ್ಷೇತ್ರಕ್ಕೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ಹೆಸರಿನ ಬಗ್ಗೆ ಚರ್ಚೆ ಆಗಿದೆ. ಅಪ್ಪಾಜಿ ಗೌಡ ಬಿಜೆಪಿ ಸೇರ್ಪಡೆಗೆ ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಪ್ರತಿಭಟನೆ
ತೇರದಾಳ ಕ್ಷೇತ್ರಕ್ಕೆ ನೇಕಾರ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ರೆಸಾರ್ಟ್ ಎದುರು ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಜೈಕಾರ ಘೋಷಣೆ ಹಾಕಿದರು. ಸಾಮಾಜಿಕ ನ್ಯಾಯದಡಿ ನೇಕಾರರಿಗೆ ಟಿಕೆಟ್ ಕೊಡುವಂತೆ ಆಗ್ರಹ ಮಾಡಿದರು.
ಇದನ್ನೂ ಓದಿ: Karnataka Election 2023: ಬೊಮ್ಮಾಯಿ, ಬಿ.ಸಿ. ಪಾಟೀಲ್, ಶ್ರೀರಾಮುಲು ಸೇರಿ ಹಲವರಿಗೆ ಬಿಜೆಪಿ ಟಿಕೆಟ್ ಫಿಕ್ಸ್