ಮಂಗಳೂರು: ಕೇಂದ್ರ ಸಹಕಾರ ಸಚಿವರಾದ ಹಿರಿಯ ಬಿಜೆಪಿ ನಾಯಕ ಅಮಿತ್ ಶಾ (BJP Leader Amit Shah) ಆವರು ನಿಜವಾದ ಸಹಕಾರಿ (Amit Shah true Co-operative) ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಗುಣಗಾನ ಮಾಡಿದ್ದಾರೆ. ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ರಾಜಣ್ಣ ಅವರು ಮಾಧ್ಯಮ ಗೋಷ್ಠಿಯಲ್ಲಿ ಅಮಿತ್ ಶಾ ಅವರನ್ನು ಬಾಯಿ ತುಂಬಾ ಹೊಗಳಿದರು.
ʻʻಅಮಿತ್ ಶಾ ಇಂದಿಗೂ ಒಂದು ಹಳ್ಳಿಯ ಸೊಸೈಟಿಯ ಅಧ್ಯಕ್ಷರು. ತುಂಬಾ ಜನರಿಗೆ ಈ ಬಗ್ಗೆ ಗೊತ್ತಿಲ್ಲ. ಅವರು ಅಹಮದಾಬಾದ್ ಜಿಲ್ಲಾ ಬ್ಯಾಂಕ್, ಗುಜರಾತ್ ಅಫೆಕ್ಸ್ ಬ್ಯಾಂಕ್‌ನ ನಿರ್ದೇಶಕರು ಕೂಡಾ. ಅವರು ತಳಮಟ್ಟದ ಸಹಕಾರಿ ವ್ಯವಸ್ಥೆಯಿಂದ ಬಂದಿರುವುದರಿಂದ ಅವರಿಗೆ ಸಹಕಾರಿ ಸಂಘಗಳ ಎಲ್ಲಾ ವಿಚಾರಗಳು ಗೊತ್ತಿವೆ. ಅಂಥವರು ಒಬ್ಬರು ನಮ್ಮ ಸಹಕಾರ ಸಚಿವರಾಗಿರುವುದು ನಮಗೆ ಹೆಮ್ಮೆ ಎಂದು ಹೇಳಿದರು.
ಒಬ್ಬ ಕಾಂಗ್ರೆಸ್ ನಾಯಕನಾಗಿ, ರಾಜ್ಯದ ಸಚಿವರಾಗಿ ಈ ರೀತಿ ನಾನು ಹೇಳಿಕೆ ಕೊಟ್ಟಿರುವುದನ್ನು ಮತ್ತು ಪಕ್ಷದ ದೃಷ್ಟಿಯಲ್ಲಿ ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ, ನಾನೊಬ್ಬ ಸಹಕಾರಿಯಾಗಿ ಅವರು ಸಹಕಾರ ಮಂತ್ರಿ ಆಗಿರುವುದನ್ನು ಸ್ವಾಗತಿಸಿದ್ದೇನೆ ಎಂದು ಕೆ.ಎನ್. ರಾಜಣ್ಣ ಹೇಳಿದರು.
ʻʻಅಮಿತ್ ಶಾ ಅವರು ಸಹಕಾರ ಮಂತ್ರಿಯಾದ ದಿನವೇ ಸ್ವಾಗತಿಸಿದ್ದೇನೆ. ಸಹಕಾರಿ ಆಂದೋಲನಕ್ಕೆ ಅವರಿಂದ ಶಕ್ತಿ ಸಿಗುತ್ತದೆ. ಯಾರೋ ಮಾಹಿತಿಯೇ ಗೊತ್ತಿಲ್ಲದವರು ಸಹಕಾರ ಸಚಿವರಾಗಿ ಬಂದಾಗ ಅವರಿಗೆ ಪಾಠ ಮಾಡಿ ತಿಳಿಸಬೇಕಾಗುತ್ತದೆ. ಅಷ್ಟೊತ್ತಿಗೆ ಅವಧಿ ಮುಗಿದು ಹೋಗಿರುತ್ತದೆ. ಇವರು ಬಂದಿರುವುದರಿಂದ ನಮಗೆ ಅನುಕೂಲ ಆಗುತ್ತದೆ ಎಂದು ನಾನು ಅಂದೇ ಸ್ವಾಗತಿಸಿದ್ದೆʼʼ ಎಂದು ರಾಜಣ್ಣ ಹೇಳಿದರು.
ಸಹಕಾರ ವ್ಯವಸ್ಥೆಯ ಅಭಿವೃದ್ಧಿ ವಿಷಯದಲ್ಲಿ ನಮಗೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲ. ಸಹಕಾರಿ ಆಂದೋಲನಕ್ಕೆ ಪೂರಕ ಸಲಹೆ ನೀಡಿದರೆ ನಾವು ಖಂಡಿತವಾಗಿಯೂ ತೆಗೆದುಕೊಳ್ಳುತ್ತೇವೆ ಎಂದು ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದರು.
ಕೆ.ಎನ್. ರಾಜಣ್ಣ ಅವರು ಸಹಕಾರ ಸಚಿವರಾಗಿ ಸಾಕಷ್ಟು ಹೆಸರು ಮಾಡಿದವರು. ತುಮಕೂರಿನ ಸಹಕಾರ ಸಂಘಗಳ ಮೂಲಕವೇ ರಾಜಕೀಯ ಪ್ರವೇಶವನ್ನೂ ಮಾಡಿದವರು. ಹೀಗಾಗಿ ಅವರಿಗೆ ಸಹಕಾರ ವ್ಯವಸ್ಥೆಯ ಒಳಸುಳಿವುಗಳು ಸ್ಪಷ್ಟವಾಗಿ ತಿಳಿದಿದೆ. ಇಂಥವರು ಸಹಕಾರ ಸಚಿವರಾಗಿದ್ದಾಗ ಯಾವುದೇ ಭ್ರಷ್ಟಾಚಾರ, ಸುಳ್ಳು ಲೆಕ್ಕಗಳಿಗೆ ಅವಕಾಶ ಇರುವುದಿಲ್ಲ.
ಈ ನಡುವೆ, ಅಮಿತ್ ಶಾ ಅವರನ್ನು ಹಾಡಿ ಹೊಗಳಿದ ವಿಚಾರ ಕಾಂಗ್ರೆಸ್‌ನಲ್ಲಿ ಸಣ್ಣ ಮಟ್ಟಿನ ಚರ್ಚೆಯನ್ನು ಹುಟ್ಟು ಹಾಕುವ ಸಾಧ್ಯತೆ ಇದೆ. ತುಮಕೂರು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿ ಕೆಲವೊಂದು ಮಾಹಿತಿಗಳು ರಾಜಣ್ಣ ಅವರಿಗೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮಾಜಿ ಶಾಸಕ, ಜೆಡಿಎಸ್‌ನ ಡಿ.ಸಿ. ಗೌರಿಶಂಕರ್ ಅವರು ಕಾಂಗ್ರೆಸ್ ಸೇರುವ ವಿಚಾರ ತನಗೆ ಗೊತ್ತೇ ಇಲ್ಲ ಎಂದು ಹಿಂದಿನ ದಿನದವರೆಗೂ ಹೇಳಿದ್ದರು. ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವುದಾಗಿಯೂ ಅವರು ತಿಳಿಸಿದ್ದರು.