Site icon Vistara News

BJP Karnataka: ಮಾರೇಗೌಡ ಅಮಾನತು ತೆರವು; ಎಸ್.ಟಿ. ಸೋಮಶೇಖರ್‌ಗೆ ಟಕ್ಕರ್ ನೀಡಿತಾ ಬಿಜೆಪಿ?

ST Somashekar And Maregowda

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತ್ತಾಗಿದ್ದ ಯಶವಂತಪುರ ಮಂಡಲ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಮಾರೇಗೌಡ ಮತ್ತೆ ಬಿಜೆಪಿಗೆ (BJP Karnataka) ಮರಳಿದ್ದಾರೆ. ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅಸಮಾಧಾನ ಹೊರಹಾಕಿದ್ದರಿಂದ ಅವರನ್ನು ಸಮಾಧಾನಪಡಿಸಲು ಮಾರೇಗೌಡ ಮತ್ತು ಬೆಂಬಲಿಗರನ್ನು ಅಮಾನತು ಮಾಡಲಾಗಿತ್ತು. ಆದರೆ, ಮಾಜಿ ಸಚಿವರು ಬಿಜೆಪಿ ಕಾರ್ಯಕ್ರಮಗಳಿಗೆ ದೂರವಾಗಿ ಮತ್ತೆ ಕಾಂಗ್ರೆಸ್ ನಾಯಕರ ಜತೆ ಹೆಚ್ಚಾಗಿ ಕಾಣಿಸಿಕೊಳುತ್ತಿರುವುದರಿಂದ ಮಾರೇಗೌಡರ ಅಮಾನತನ್ನು ರಾಜ್ಯ ಬಿಜೆಪಿ ತೆರವು ಮಾಡಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಮಾಜಿ ಸಚಿವ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಬಿಜೆಪಿ ವಿರುದ್ಧ ಮುನಿಸಿಕೊಂಡು ಪುನಃ ಕಾಂಗ್ರೆಸ್‌ನತ್ತ ಮುಖ ಮಾಡಿದ್ದರು. ಅಲ್ಲದೆ, ಸುದ್ದಿಗೋಷ್ಠಿ ನಡೆಸಿ ಸ್ಥಳೀಯ ಮುಖಂಡರ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದ ಕುರಿತು ವರಿಷ್ಠರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಇದರ ಜತೆಗೆ ಎಸ್‌.ಟಿ. ಸೋಮಶೇಖರ್ ಈಚೆಗೆ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಹಾಡಿ ಹೊಗಳಿದ್ದರು. ಇದರಿಂದ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಅವರನ್ನು ಸಮಾಧಾನಪಡಿಸಲು ಮಾರೇಗೌಡ ಮತ್ತು ಬೆಂಬಲಿಗರನ್ನು ರಾಜ್ಯ ಬಿಜೆಪಿ ವಾಪಸ್‌ ಪಡೆದಿತ್ತು. ಆದರೆ, ಮತ್ತೆ ಕಾಂಗ್ರೆಸ್ ನಾಯಕರ ಜತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಸ್‌.ಟಿ. ಸೋಮಶೇಖರ್‌ಗೆ ಟಕ್ಕರ್‌ ನೀಡಲು ಸಿ.ಎಂ. ಮಾರೆಗೌಡರ ಅಮಾನತು ಆದೇಶವನ್ನು ವಿಜಯೇಂದ್ರ ಅವರು ವಾಪಸ್‌ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ | Budget 2024: ಭಾರತ ವಿಭಜನೆ; ಡಿ.ಕೆ. ಸುರೇಶ್‌ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ!

ಅಮಾನತು ವಾಪಸ್ ಪಡೆದ ಬಳಿಕ ಬಿಜೆಪಿ ಕಚೇರಿಗೆ ಮಾರೇಗೌಡ ಗುರುವಾರ ಆಗಮಿಸಿದ್ದಾರೆ. ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಜಿಲ್ಲಾಧ್ಯಕ್ಷ ಹರೀಶ್ ಸೇರಿ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ. ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾರೇಗೌಡ ಅಮಾನತುಗೊಂಡಿದ್ದರು. ಇವರು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿಯಾಗಿದ್ದಾರೆ.

Exit mobile version