Site icon Vistara News

Group Clash: ಗೋವಿಂದರಾಜನಗರ ಕ್ಷೇತ್ರದಲ್ಲಿ ಗುಂಪು ಘರ್ಷಣೆ; ಬಿಜೆಪಿ ಮುಖಂಡನಿಗೆ ಗಂಭೀರ ಗಾಯ

BJP leader seriously injured in Group clashes in Govindarajanagar

#image_title

ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದಲ್ಲಿ ಫ್ಲೆಕ್ಸ್‌ ವಿಚಾರವಾಗಿ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರ ನಡುವೆ ನಡೆದ ಗಲಾಟೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜಕುಮಾರ್ ವಾರ್ಡ್ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ ಗಾಯಾಳು. ಕಾಂಗ್ರೆಸ್‌ನವರು ಕಲ್ಲಿನಿಂದ ಹಲ್ಲೆ ಮಾಡಿದ್ದರಿಂದ ಅರುಣ್‌ ಕುಮಾರ್‌ ತಲೆಗೆ ಗಂಭೀರ ಗಾಯಗಳಾಗಿವೆ ಎಂಬ ಆರೋಪ ಕೇಳಿಬಂದಿವೆ. ಶುಕ್ರವಾರ ಸಂಜೆ ನಡೆದ ಗಲಾಟೆಯಲ್ಲಿ ತಡೆಯಲು ಹೋಗಿದ್ದ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದವು. ಇದೇ ವೇಳೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ನಾನು ಹು ಅಂದ್ರೆ ಕಾರ್ಯಕರ್ತರು ಕೆರಳುತ್ತಾರೆ: ಸೋಮಣ್ಣ

ಗೋವಿಂದರಾಜನಗರ ಕ್ಷೇತ್ರದಲ್ಲಿ ಗಲಾಟೆ ಪ್ರಕರಣದ ಬಗ್ಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ಬೆಂಗಳೂರು ಅಲ್ಲವೇ, ಇಂತಹವೆಲ್ಲಾ ನಡೆಯುತ್ತಿರುತ್ತವೆ. ನನಗೆ ಈ ಬಗ್ಗೆ ಮಾಹಿತಿಯಿಲ್ಲ‌. ಕಾಂಗ್ರೆಸ್‌ನವರು ಧೃತಿಗೆಟ್ಟಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಗಲಾಟೆ ನಡೆದಿಲ್ಲ. ನನ್ನ ಮೇಲಿನ ಸೇಡನ್ನು ನಮ್ಮ ಕಾರ್ಯಕರ್ತರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಜಗಳ ಮಾಡುವುದು ಬಿಟ್ಟರೆ ಅಪ್ಪ, ಮಕ್ಕಳಿಗೆ ಬೇರೆ ಏನು ಗೊತ್ತಿಲ್ಲ ಎಂದು ಪ್ರಿಯಕೃಷ್ಣ ವಿರುದ್ಧ ಆರೋಪಿಸಿದರು. ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಂದ ವಿರೋಧಿಗಳು ಹತಾಶರಾಗಿದ್ದಾರೆ. ನಾನು ಹು ಅಂದ್ರೆ ನಮ್ಮ ಕಾರ್ಯಕರ್ತರು ಕೆರಳುತ್ತಾರೆ. ಆದರೆ ಅಂತಹುದಕ್ಕೆಲ್ಲ ನಾನು ಬಿಡಲ್ಲ ಎಂದು ಹೇಳಿದ್ದಾರೆ.

ಏನಿದು ಘಟನೆ?

ಫ್ಲೆಕ್ಸ್‌ ಕಟ್ಟುವ ವಿಚಾರದಲ್ಲಿ ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರ ನಡುವೆ ಜಗಳ, ಕಲ್ಲು ತೂರಾಟ (Group Clash) ನಡೆದು ವಿಜಯನಗರದ ಬಿಜಿಎಸ್‌ ಮೈದಾನದಲ್ಲಿ ಶುಕ್ರವಾರ ಸಂಜೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ಧಾವಿಸಿ ಲಾಠಿ ಚಾರ್ಚ್‌ ಮಾಡುವ ಮೂಲಕ ಗುಂಪು ಚದುರಿಸಿದರು. ಗಲಾಟೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದವು.

ಕಾಂಗ್ರೆಸ್‌ ವತಿಯಿಂದ ಮಾರ್ಚ್‌ 19 ರಂದು ಸ್ತ್ರೀಶಕ್ತಿ ಮಹಿಳಾ ಸಮಾಜದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಫ್ಲೆಕ್ಸ್‌ ಕಟ್ಟಲು ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರು ಮುಂದಾಗಿದ್ದರು. ಕ್ರಿಕೆಟ್‌ ಆಡುತ್ತಿದ್ದ ಕೆಲ ಯುವಕರು, ಭಾನುವಾರ ಇರುವ ಕಾರ್ಯಕ್ರಮಕ್ಕೆ ಶನಿವಾರ ಫ್ಲೆಕ್ಸ್‌ ಹಾಕಬಹುದಿತ್ತು, ಈಗ ಯಾಕೆ ಹಾಕುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಈ ಗಲಾಟೆ ರಾಜಕೀಯ ತಿರುವು ಪಡೆದು ರಾದ್ಧಾಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Lokayukta Raid: ಮಾಡಾಳ್‌ ಅರೆಸ್ಟ್‌ ಯಾಕೆ ಮಾಡ್ಬೇಕು? ಸಿನಿಮಾ ಸ್ಟೈಲಲ್ಲಿ ಟಾರ್ಚರ್‌ ಕೊಟ್ಟು ಬಾಯಿ ಬಿಡಿಸ್ತೀರಾ ಎಂದು ಕೇಳಿದ ಕೋರ್ಟ್‌

ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಹೋಗಿದ್ದಾರೆ. ತಕ್ಷಣ ಗೋವಿಂದರಾಜ ನಗರ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಲಾಠಿ ಚಾರ್ಚ್‌ ನಡೆಸಿ ಗುಂಪು ಚದುರಿಸಿದರು. ಈ ವಿಚಾರ ತಿಳಿಯಿತ್ತಿದ್ದಂತೆ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿ 100 ಪೊಲೀಸರನ್ನು ಬಿಗಿ ಭದ್ರತೆಗೆ ಆಯೋಜಿಸಿದ್ದಾರೆ.

Exit mobile version