ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಲೈಂಗಿಕ ದೌರ್ಜನ್ಯ ಎಸಗಿರುವ, ಅಶ್ಲೀಲ ವಿಡಿಯೊಗಳ ವೈರಲ್ ಆಗಿರುವ ಪ್ರಕರಣವು ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸುದ್ದಿಯಾಗಿದೆ. ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (Hassan Pen Drive Case) ದಾಖಲಾಗಿದ್ದು, ಜೆಡಿಎಸ್ ಜತೆಗೆ ಮೈತ್ರಿ ಪಕ್ಷವಾದ ಬಿಜೆಪಿಗೂ ಇದು ಮುಜುಗರ ಉಂಟು ಮಾಡಿದೆ. ಇದರ ಬೆನ್ನಲ್ಲೇ, ಪ್ರಜ್ವಲ್ ರೇವಣ್ಣ ವಿಡಿಯೊಗಳ ಕುರಿತು ಬಿಜೆಪಿ ನಾಯಕರೊಬ್ಬರು ಕೆಲ ತಿಂಗಳ ಹಿಂದೆಯೇ ಎಚ್ಚರಿಸಿದ್ದರು. ಆದರೂ, ಪ್ರಜ್ವಲ್ ರೇವಣ್ಣಗೇ ಟಿಕೆಟ್ ಸಿಕ್ಕಿತು ಎಂಬ ವಿಷಯವೀಗ ಬಹಿರಂಗವಾಗಿದೆ.
ಹೌದು, ಹಾಸನ ಜಿಲ್ಲೆಯ ಬಿಜೆಪಿ ಮುಖಂಡ, 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ. ದೇವರಾಜೇಗೌಡ ಅವರು 2023ರ ಡಿಸೆಂಬರ್ 8ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು. ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೊಗಳು ಇವೆ. ಅವರಿಗೆ ಟಿಕೆಟ್ ನೀಡುವುದು ಒಳ್ಳೆಯದಲ್ಲ ಎಂಬುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ದೇವರಾಜೇಗೌಡ ಅವರು ಪತ್ರ ಬರೆದಿದ್ದರು. ಇಷ್ಟಾದರೂ, ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿದರು. ಈಗ ಇದು ಜೆಡಿಎಸ್ ಹಾಗೂ ಬಿಜೆಪಿಗೆ ಮುಜುಗರ ಉಂಟುಮಾಡಿದೆ.
ಪತ್ರದಲ್ಲಿ ಏನಿತ್ತು?
“ಪ್ರಜ್ವಲ್ ರೇವಣ್ಣ ಸೇರಿ ಎಚ್.ಡಿ.ದೇವೇಗೌಡ ಕುಟುಂಬದ ಹಲವರ ವಿರುದ್ಧ ಹತ್ತಾರು ಆರೋಪಗಳಿವೆ. ಪ್ರಜ್ವಲ್ ರೇವಣ್ಣ ಅವರ 2,976 ಅಶ್ಲೀಲ ವಿಡಿಯೊಗಳು ಇರುವ ಪೆನ್‌ಡ್ರೈವ್ ನನಗೆ ಸಿಕ್ಕಿದೆ. ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳು, ಅದಕ್ಕೆ ಸಾಕ್ಷ್ಯಗಳು ಇವೆ. ಹಾಗಾಗಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿಗೆ ಮುಜುಗರ ಉಂಟಾಗುತ್ತದೆ. ಅವರ ವಿಡಿಯೊಗಳೇ ಮುಂದೆ ನಮ್ಮ ವಿರುದ್ಧ ಬ್ರಹ್ಮಾಸ್ತ್ರವನ್ನಾಗಿ ಬಳಸಲಾಗುತ್ತದೆ. ಹಾಗಾಗಿ, ಟಿಕೆಟ್ ಘೋಷಣೆ ಮಾಡುವ ಮುನ್ನ ಯೋಚನೆ ಮಾಡುವುದು ಒಳಿತು” ಎಂಬುದಾಗಿ ಡಿ. ದೇವರಾಜೇಗೌಡ ಪತ್ರದ ಮೂಲಕ ಎಚ್ಚರಿಸಿದ್ದರು ಎಂದು ತಿಳಿದುಬಂದಿದೆ.
ಆರೋಪ ಸಾಬೀತಾದರೆ ಏನು ಶಿಕ್ಷೆ?
ಐಪಿಸಿ ಸೆಕ್ಷನ್ 354A, 354D, 506, 509 ಅಡಿ ಕೇಸ್ ದಾಖಲಾಗಿದ್ದು, ಆರೋಪ ಸಾಬೀತಾದರೆ ಏನೆಲ್ಲಾ ಶಿಕ್ಷೆ ಆಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಮಹಿಳೆಯ ಜತೆ ಲೈಂಗಿಕ ಸಂಪರ್ಕ ಬೆಳೆಸುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಇಡುವುದು. ಮಹಿಳೆಗೆ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲತೆ ತೋರಿಕೆ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 354A ಅಡಿ ಸೆಕ್ಷನ್ ದಾಖಲು ಮಾಡಲಾಗುತ್ತದೆ. ಈ ಸೆಕ್ಷನ್ ಅಡಿ ಆರೋಪಿತ ವ್ಯಕ್ತಿಗೆ ಒಂದು ವರ್ಷ ಜೈಲು ಅಥವಾ ದಂಡ ವಿಧಿಸಲಾಗುತ್ತದೆ.
ಐಪಿಸಿ ಸೆಕ್ಷನ್ 354D– ಪದೇ ಪದೇ ಮಹಿಳೆಯರ ಸಂಪರ್ಕ ಬೆಳೆಸಲು ಪ್ರಯತ್ನ, ಇಂಟರ್ನೆಟ್ ಅಥವಾ ಇಮೇಲ್ ಅಥವಾ ವಿಡಿಯೊ ಕಾಲ್ ಸಂವಹನ ಮಾಡಿದರೆ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾಗುತ್ತದೆ. ಇದಕ್ಕೆ ದಂಡ ಅಥವಾ ಮೂರು ವರ್ಷ ಜೈಲು ವಿಧಿಸುವ ಸಾಧ್ಯತೆ.
ಐಪಿಸಿ ಸೆಕ್ಷನ್ 509: ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕ್ರಿಯೆ.ಈ ಸೆಕ್ಷನ್ ಅಡಿ 3ವರ್ಷ ಸರಳ ಜೈಲು ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ. ಸದ್ಯ ಈ ಎಲ್ಲಾ ಸೆಕ್ಷನ್‌ಗಳ ಅಡಿ ಸಂಸದ ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಪ್ರಕರಣದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಎಲ್ಲಾ ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ರೇವಣ್ಣ ಕೇಸ್; ಎಸ್‌ಐಟಿ ತನಿಖೆ ಹೇಗಿರುತ್ತೆ? ತಪ್ಪಿಸಿಕೊಳ್ಳೋಕೆ ಇರೋ ಚಾನ್ಸ್ ಏನು?