ಚಿಕ್ಕಬಳ್ಳಾಪುರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಸೇರಿ 5 ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಈ ನಡುವೆ ಸರ್ಕಾರಿ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸಲು ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರೊಬ್ಬರು ಉಚಿತ ತಾಂತ್ರಿಕ ವ್ಯವಸ್ಥೆ ಮಾಡುವ ಮೂಲಕ ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೆಗಲುಕೊಟ್ಟಿದ್ದಾರೆ.
ಶಿಡ್ಲಘಟ್ಟದ ಸೇವಾಸೌಧದಲ್ಲಿ ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಮಾಡಿಸಲು ಬಿಜೆಪಿ ಸೀಕಲ್ ರಾಮಚಂದ್ರಗೌಡ ಎಂಬುವವರು ಉಚಿತ ವ್ಯವಸ್ಥೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಚಾಲನೆ ನೀಡಿರುವುದು ಮತ್ತೊಂದು ವಿಶೇಷವಾಗಿದೆ.
ಶ್ರೀ ಬಾಲಾಜಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಜನಪರ ಸೇವೆ ಮಾಡುತ್ತಿರುವ ಸೀಕಲ್ ರಾಮಚಂದ್ರಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಿಗುವ ಸೇವೆಗಳನ್ನು ಜನರಿಗೆ ಉಚಿತವಾಗಿ ತಲುಪಿಸಲು ನೆರವಾಗಿದ್ದಾರೆ.
ಶಿಡ್ಲಘಟ್ಟದ ಸೇವಾಸೌಧದ ಹೊರಯಾಗಿಯೂ ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಜನರು ವಿವಿಧ ಯೋಜನೆಗಳ ಸೌಲಭ್ಯ ಉಚಿತ ನೋಂದಣಿಗೆ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರ ಯಾವುದೇ ಇರಲಿ ಬಡಜನರಿಗೆ ಅನುಕೂಲವಾಗಬೇಕು ಎಂದು ಸೀಕಲ್ ರಾಮಚಂದ್ರಗೌಡ ಸಮಾಜ ಸೇವೆ ಮಾಡುತ್ತಿದಾರೆ. ಅರ್ಧ ಎಕರೆ ಜಾಗದಲ್ಲಿ ಅಗತ್ಯ ಸಿಬ್ಬಂದಿ, ತಾಂತ್ರಿಕ ವ್ಯವಸ್ಥೆ ಜತೆಗೆ ಕುಡಿಯುವ ನೀರು, ಕಾಫಿ, ಟಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.
ತಿಂಗಳೊಳಗೆ ಗ್ಯಾರಂಟಿಗಳು ಜಾರಿಯಾಗಬೇಕು, ಇಲ್ಲವೆಂದರೆ ಉಗ್ರ ಹೋರಾಟ
ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿ ಸಂಸದ ಎಸ್. ಮುನಿಸ್ವಾಮಿ ಅವರು, ಇನ್ನು ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆಗಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ, ಡಿಕೆಶಿ ರಾಜೀನಾಮೆ ಕೊಡಬೇಕು. ಸಚಿವ ಸಂಪುಟ ವಜಾಗೊಳಿಸಿ ಮನೆಗೆ ಹೋಗಬೇಕು. ತಪ್ಪಿದರೆ ನಾವು ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದ ಅವರು, ಅತ್ತೆ-ಸೊಸೆ ಜುಟ್ಟು ಹಿಡಿದುಕೊಳ್ಳುವ ಹಾಗೆ ಮಾಡಿದರು. ಯುವಕರಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿ ಆಸೆ ಮೂಡಿಸಿದ್ದಾರೆ. ಯುವಕರೆಲ್ಲಾ ಕೆಲಸಗಳಿಗೆ ಹೋಗುವುದು ಬಿಟ್ಟು ಯುವನಿಧಿಗಾಗಿ ಅರ್ಜಿ ಹಾಕಲು ಕ್ಯೂ ನಿಲ್ಲೋ ಹಾಗೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮೋದಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದ ಅವರು, ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ನಾವು ಮುಂದಾಗಿದ್ದೇವೆ. ನೀವು ಕೇಳಿದ ದಾಖಲೆಗಳನ್ನು ಜನರಿಂದ ಕೊಡಿಸುತ್ತೇವೆ. ನೀವು ಕೊಡುವುದಕ್ಕೆ ರೆಡಿ ಇದ್ದೀರಾ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
ಇದನ್ನೂ ಓದಿ | Karnataka politics : ಹೊರ ರಾಜ್ಯದಿಂದ ಅಕ್ಕಿ ಖರೀದಿ ಕಮಿಷನ್ ಹೊಡೆಯೋ ಹುನ್ನಾರ ಎಂದ ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಬಹುದು. ಗ್ರಾಮೀಣ ಭಾಗದ ಬಹುತೇಕ ಕಡೆ ಸರ್ಕಾರಿ ಬಸ್ ಸೌಕರ್ಯವೇ ಇಲ್ಲ, ಅಂತಹ ಕಡೆ ಮೊದಲು ಬಸ್ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.
ಯಾರಾದರೂ ಜಾಸ್ತಿ ಮಾತನಾಡಿದ್ರೆ ಜೈಲಿಗೆ ಹಾಕುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳುತ್ತಾರೆ. ನಾನು ಪ್ರತಿ ದಿನ ಮಾತನಾಡುತ್ತಿದ್ದೇನೆ. ತಾಕತ್ ಇದ್ದರೆ ಕೇಸ್ ಹಾಕಿ ನೋಡೋಣ ಎಂದು ಕಿಡಿಕಾರಿದ ಅವರು, ಇನ್ನೆರಡು ವರ್ಷ ಕಾಯಿರಿ, ಸಿದ್ದರಾಮಯ್ಯನನ್ನು ಹೇಗೆ ಕೆಳಗೆ ಇಳಿಸುವುದು ಎಂದು ಡಿಕೆಶಿ ಸ್ಕೆಚ್ ಹಾಕುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿ ನೆಮ್ಮದಿಯಾಗಿ ಇರೋಣ ಅಂದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.