ಬೆಳಗಾವಿ: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ (Panchamasali Reservation) ಸಮಾಜವನ್ನು ಗೊಂದಲದಲ್ಲಿ ಇಡಲಾಗಿದೆ. ಮುಖ್ಯಮಂತ್ರಿಗಳು ಒಂದು ಥರ ಹೇಳ್ತಾರೆ, ಕಾನೂನು ಮಂತ್ರಿಗಳು ಇನ್ನೊಂದು ಥರ ಹೇಳುತ್ತಾರೆ. ಈ ಬಗ್ಗೆ ಸ್ಪಷ್ಟತೆ ಬೇಕು. ಪಂಚಮಸಾಲಿ ಮೀಸಲಾತಿ ಘೋಷಣೆಗೆ ೨೪ ತಾಸು ಗಡುವು ಕೊಡುತ್ತೇವೆ- ಹೀಗೆಂದು ಮತ್ತೆ ಗುಡುಗಿದ್ದಾರೆ ವಿಜಯಪುರ ಶಾಸಕ, ಪಂಚಮಸಾಲಿ ಹೋರಾಟದ ಮುಂದಾಳು ಬಸನ ಗೌಡ ಪಾಟೀಲ್ ಯತ್ನಾಳ್.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಕೊಡಲು ಆಗುವುದಿಲ್ಲ ಎಂದಾದರೆ ಅದನ್ನಾದರು ಹೇಳಿಬಿಡಿ, ಕ್ಷಮಿಸುತ್ತೇವೆ ಎಂದೂ ಹೇಳಿದರು ಯತ್ನಾಳ್. ಪಂಚಮಸಾಲಿ ಸಮುದಾಯವನ್ನು ೨ಎಗೆ ಸೇರಿಸಬೇಕು ಎಂದು ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ, ಹೋರಾಟ ನಡೆದಿತ್ತು. ಅಂತಿಮವಾಗಿ ರಾಜ್ಯ ಸರಕಾರ ೨ನೇ ಪ್ರವರ್ಗದಲ್ಲಿ ೨ಸಿ ಮತ್ತು ೨ಡಿ ಎಂಬ ಎರಡು ಹೊಸ ವರ್ಗಗಳನ್ನು ಸೃಷ್ಟಿಸಿ ಕೇಂದ್ರ ಸರಕಾರ ಮೇಲ್ವರ್ಗದ ಬಡವರಿಗೆಂದು ನಿಗದಿ ಮಾಡಿರುವ ಶೇ. ೧೦ ವಿಶೇಷ ಮೀಸಲಾತಿಯಲ್ಲಿ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡುವ ಭರವಸೆಯನ್ನು ನೀಡಿತ್ತು. ಆದರೆ, ಇದು ಕಾರ್ಯಸಾಧುವೇ? ದೇಶದಲ್ಲೇ ಮೊದಲ ಬಾರಿಗೆ ಇಂಥಹುದೊಂದು ಪ್ರಸ್ತಾಪ ಮಾಡಲಾಗಿದ್ದು, ಇದಕ್ಕೆ ಕಾನೂನಿನ ಮಾನ್ಯತೆ ಸಿಗಬಹುದೇ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಎರಡೂ ಸಮುದಾಯಗಳಿಗೆ ಈ ಬಗ್ಗೆ ಗೊಂದಲಗಳಿದ್ದವು. ಪಂಚಮಸಾಲಿ ನಾಯಕರಂತೂ ಈ ಬಗ್ಗೆ ಸ್ಪಷ್ಟತೆ ಸಿಗದೆ ಪ್ರತಿಕ್ರಿಯಿಸುವುದಿಲ್ಲ ಎಂದು ಘೋಷಿಸಿದ್ದರು.
ಈ ನಡುವೆ ಗುರುವಾರ ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲ ಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಮಾಧ್ಯಮ ಗೋಷ್ಠಿಯನ್ನು ನಡೆಸಿ ಬೊಮ್ಮಾಯಿ ಅವರ ಮೇಲೆ ಮುಗಿಬಿದ್ದಿದ್ದಾರೆ. ಜತೆಗೆ ಬಿಜೆಪಿ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಎಲ್ಲದಕ್ಕೂ ಸಿದ್ಧನಾಗಿ ಬಂದಿದ್ದೇನೆ ಎಂದ ಯತ್ನಾಳ್
ʻʻನಿಮಗೆ ಆಗುವುದಿಲ್ಲ ಎಂದಾದರೆ ಕ್ಷಮೆ ಕೇಳಿ. ಕ್ಷಮೆ ನೀಡುತ್ತೇವೆ. ನೀವು ಮಾಡಲಿಲ್ಲ ಅಂದ್ರೆ ಶಿಗ್ಗಾಂವಿಯಲ್ಲಿ ನಮ್ಮ ಜನರಿಗೆ ಏನು ಹೇಳಬೇಕೋ ಹೇಳುತ್ತೇವೆ. ಮೀಸಲಾತಿ ಕೊಡ್ತೀನಿ ಅಂತಾ ತಾಯಿ ಮೇಲೆ ಆಣೆ ಮಾಡಿ ಕೈ ಕೊಟ್ಟಿದ್ದಾರೆ ಎಂದು ಶಿಗ್ಗಾಂವಿ ಜನರಿಗೆ ಹೇಳುತ್ತೇನೆʼʼ ಎಂದರು.
ʻʻನನ್ನ ಈ ನಡವಳಿಕೆಗೆ ಸೂರ್ಯ ಚಂದ್ರ ಇರೋವರೆಗೆ ನಿಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡ್ತೀನಿ ಅಂತಾ ಹೇಳಬಹುದು. ಯಾವುದೇ ಚಿಹ್ನೆ ಇಲ್ಲದೆ ಹೆಚ್ಚಿನ ಮತಗಳಿಂದ ಪರಿಷತ್‌ಗೆ ಆಯ್ಕೆ ಆದೋನು ನಾನು. ನಾನು ಎಲ್ಲಕ್ಕೂ ಸಿದ್ಧ ಆಗಿಯೇ ಬಂದಿದ್ದೇನೆʼʼ ಎಂದು ಸವಾಲು ಹಾಕೋ ತರ ಮಾತನಾಡಿದರು ಬೊಮ್ಮಾಯಿ.
೨೦೨೩ರ ಮೇ ಬಂದಾಗ ಗೊತ್ತಾಗುತ್ತದೆ
ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಸರಕಾರ ಯಾಕಿಷ್ಟು ಹಗುರವಾಗಿ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻಅವರಿಗೆ ಗೊತ್ತಿಲ್ಲ. ಎಲ್ಲವೂ 2023ರ ಮೇದಾಗ ಗೊತ್ತಾಗುತ್ತದೆ. ವರ್ಷದ ಹಿಂದೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಷ್ಟು ಲೀಡ್‌ನಲ್ಲಿ ಗೆದ್ದಿದ್ದೀರಿ ಅಂತ ನೆನಪು ಮಾಡಿಕೊಳ್ಳಿ. ವಿಧಾನ ಪರಿಷತ್ ಚುನಾವಣೆಯಲ್ಲಿ ಏಕೆ ಸೋತಿದ್ದೇವೆ ಎನ್ನುವುದನ್ನೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕುʼʼ ಎಂದರು.
ʻʻನಾನು ಪಕ್ಷದ ವಿರುದ್ಧ ಮಾತನಾಡುತ್ತಿದ್ದೇನೆ ಅಂತಲ್ಲ. ಬಿಜೆಪಿ 150 ಸೀಟ್ ಬರಬೇಕು ಅಂತಾ ಇದನ್ನೆಲ್ಲ ಪ್ರಯತ್ನ ಮಾಡ್ತಿದೀನಿ. ನಮ್ಮಲ್ಲಿ ಕಾಂಗ್ರೆಸ್ ಜೊತೆ ಅಡ್ಜಸ್ಟ್‌ಮೆಂಟ್ ಆದ ಕೆಲವು ಲೀಡರ್‌ಗಳು ಇದ್ದಾರೆ. ನಾನು ಶಾಸಕ ಆಗಬೇಕು. ನನ್ನ ಮಗ ಆಗಬೇಕು ಅಂತಾ ಹಲ್ಕಾ ಕೆಲಸ ಮಾಡೋರು ಇದ್ದಾರಲ್ಲಾ.. ಅವರು ಮಾಡ್ತಾ ಇದಾರೆ. ನಾನು ಪಕ್ಷಕ್ಕೆ ದ್ರೋಹ ಮಾಡ್ತಿಲ್ಲʼʼ ಎಂದು ಗುಡುಗಿದರು ಯತ್ನಾಳ್.
ʻʻಬೊಮ್ಮಾಯಿ ಅವರು ಪಕ್ಷಕ್ಕೆ, ತಾಯಿಗೆ ದ್ರೋಹ ಮಾಡಲ್ಲ ಅಂತಾ ಭಾಷಣ ಮಾಡ್ತಾರೆ. ಪಂಚಮಸಾಲಿಗಳಿಗೆ ಮೀಸಲಾತಿ ನೀಡದೇ ಇದ್ರೆ ಅವರೇ ಪಕ್ಷಕ್ಕೆ ದ್ರೋಹ ಮಾಡಿದಂತೆʼʼ ಎಂದರು ಯತ್ನಾಳ್.
ಮಂತ್ರಿ ಸ್ಥಾನ ಬೇಡ ಅಂದೋನು ನಾನು..
ಪಂಚಮ ಸಾಲಿಗಳಿಗೆ ಮೀಸಲಾತಿ ಕೊಡದೆಯೇ ಸ್ಟಾರ್ ಪ್ರಚಾರಕ ಮಾಡಿ ಪಕ್ಷದ ಪರ ಪ್ರಚಾರ ಮಾಡಿ ಅಂದರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನು ಮಂತ್ರಿ ಸ್ಥಾನಾನೇ ಬೇಡ ಅಂದೋನು. ಬೊಮ್ಮಾಯಿ ಅವರು ನಾಲ್ಕೈದು ಖಾತೆ ನೀಡ್ತೀನಿ ಅಂದ್ರು ಬೇಡ ಅಂದಿದ್ದೇನೆʼʼ ಎಂದರು.
ಹಾಗಿದ್ರೆ ಪ್ರಚಾರಕ್ಕೆ ಹೋಗಲ್ವ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ʻʻಎದಕ್ಕೆ ಹೋಗಬೇಕು? ಯಾವ ಮುಖ ತಗೊಂಡು ಹೋಗಬೇಕು? ಮೀಸಲಾತಿ ನೀಡದಿದ್ರೆ ಬಿಜೆಪಿ ಪರ ಪ್ರಚಾರಕ್ಕೂ ಹೋಗಲ್ಲʼʼ ಎಂದು ಯತ್ನಾಳ್ ಹೇಳಿದರು.
ಈಗ ಓಪನ್ ಆಗಿಯೇ ಹೇಳುತ್ತಿದ್ದೇನೆ..
ʻʻನಾನು ಪಕ್ಷ ಉಳಿಯಬೇಕು ಎಂಬ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಪಕ್ಷದ ಭವಿಷ್ಯ ದೃಷ್ಟಿಯಿಂದ ಮಾತನಾಡ್ತಿದೀನಿ ನೀವು ಹೀಗೆ ಮೋಸ ಮಾಡಿದ್ರೆ ನಮ್ಮ ಪಕ್ಷಕ್ಕೆ ಹೊಡೆತ ಬೀಳುತ್ತದೆ ಅಂತ ಹೇಳುತ್ತಿದ್ದೇನೆ. ಇಷ್ಟು ದಿನ ಮುಚ್ಚಿದ ಕೋಣೆಯೊಳಗೆ ಹೇಳುತ್ತಿದ್ದೆ. ಇನ್ನು ಮೇಲೆ ಓಪನ್ ಆಗಿಯೇ ಹೇಳುತ್ತೇನೆʼʼ ಎಂದು ಹೇಳಿದರು ಯತ್ನಾಳ್.
ಹರಿಹರ ಪೀಠ ಪೇಮೆಂಟ್ ಪೀಠ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಹರಿಹರ ಪಂಚಮಸಾಲಿ ಪೀಠಕ್ಕೆ ಕರೆದುಕೊಂಡು ಹೋಗಲು ಬಿಜೆಪಿ ನಾಯಕರು ಪ್ಲ್ಯಾನ್ ಮಾಡುತ್ತಿರುವ ವಿಚಾರದ ಬಗ್ಗೆ ಕೇಳಿದಾಗ, ʻʻಸುಡುಗಾಡು… ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಲಿ. ಹರಿಹರ ಪೀಠಕ್ಕಾದರೂ ಕರೆದುಕೊಂಡು ಹೋಗಲಿ ಎಲ್ಲಾದರೂ ಕರೆದುಕೊಂಡು ಹೋಗಲಿ. ನಮಗೇನಾಗೋದಿದೆ? ಹರಿಹರ ಪೀಠಕ್ಕೆ ಹೋದ್ರೆ ಕ್ರಾಂತಿ ಆಗ್ತೇತಿ ಏನು? ಹರಿಹರ ಪೀಠ ಪೇಮೆಂಟ್ ಮಠ ಅದುʼʼ ಎಂದರು ಯತ್ನಾಳ್.
ಇದನ್ನೂ ಓದಿ | Panchamasali reservation | ಸಿಎಂ ಬೊಮ್ಮಾಯಿ ಅವರು ಇವತ್ತೇನಾದ್ರೂ ಆಟ ಆಡಿದ್ರೆ ಪರಿಣಾಮ ಗಂಭೀರ: ಯತ್ನಾಳ್ ಎಚ್ಚರಿಕೆ