ರಾಮನಗರ: ಪುಲ್ವಾಮಾ ದಾಳಿ ಆಗದಿದ್ರೆ ಮೋದಿ ಮನೆಗೆ ಹೋಗ್ತಿದ್ರು ಎಂಬ ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಬಿಜೆಪಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಟೀಕಿಸುವ ಭರದಲ್ಲಿ ಯೋಧರನ್ನು ಕಾಂಗ್ರೆಸ್ ಶಾಸಕ ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ವಿದೇಶಿ ಆಗಿದ್ರಲ್ವಾ
ವಿಪಕ್ಷನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ, ಬಾಲಕೃಷ್ಣ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಮೊದಲು ಬಿಜೆಪಿಯಲ್ಲಿದ್ದರು, ನಂತರ ಜೆಡಿಎಸ್‌ಗೆ ಹೋಗಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಅವರದು ಮೂರು ಸಿದ್ಧಾಂತ ಆಗಿದೆ. ಅಂದರೆ ಅವರ ಪಾರ್ಟಿ ಕಟ್ಟಿದವರೇ ಬ್ರಿಟಿಷರು. ಮೊದಲ ಅಧ್ಯಕ್ಷ ಎ.ಒ.ಹ್ಯೂಮ್. ಕಾಂಗ್ರೆಸ್‌ನವರ ರಕ್ತವೇ ಬ್ರಿಟಿಷರದ್ದು, ಆದರೆ ನಮನ್ನೇ ಬ್ರಿಟಿಷರು ಎಂದು ಕರೆಯುತ್ತಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Janatha Darshan : ಹಣ ಲೂಟಿ ಯಾಕೆ; ಜನತಾ ದರ್ಶನ ಮಾಡುತ್ತಿರುವ ಸಿಎಂಗೆ ಬಿಜೆಪಿಯಿಂದ 9 ಪ್ರಶ್ನೆ!
ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ಬಾಲಕೃಷ್ಣ ಅವರು ನಮ್ಮ ಪಾರ್ಟಿಯಲ್ಲೇ ಇದ್ದರು. ಬ್ರಿಟಿಷರ ಆಳ್ವಿಕೆಗೆ ಬಿಜೆಪಿಯನ್ನು ಹೋಲಿಕೆ ಮಾಡಿರುವುದು ಸರಿಯಲ್ಲ. ಅವರು ಪಕ್ಷದಲ್ಲಿದ್ದಾಗ ಹೇಗೆ ಇತ್ತೋ ಈಗಲೂ ಅದೇ ರೀತಿ ಬಿಜೆಪಿ ಇದೆ. ನಮ್ಮ ಪಕ್ಷ ಸರ್ವ ಧರ್ಮಗಳನ್ನೂ ಸಮನಾಗಿ ಕಾಣುತ್ತದೆ ಎಂದು ತಿಳಿಸಿದ್ದಾರೆ.
ಬಾಲಕೃಷ್ಣನೇ ಬ್ರಿಟಿಷರಿದ್ದಂತೆ ಇದ್ದಾನೆ ಎಂದ ಜಿಗಜಿಣಗಿ
ಸಂಸದ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿ, ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಹೇಗೆ ಕಾರಣರಾಗುತ್ತಾರೆ? ಆದರೆ, ದೇಶದ ರಕ್ಷಣೆಗಾಗಿ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಮಾಗಡಿ ಶಾಸಕನ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಅವನೇ ಬ್ರಿಟಿಷರಿದ್ದಂತೆ ಇದ್ದಾನೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದೇನು?
ರಾಮನಗರ: ಪುಲ್ವಾಮಾ ದಾಳಿಯಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಆದರೆ, ಈ ಬಾರಿ ವಿಶ್ವಮಾನವ ಆಗಲು ಟಾಟಾ ಮಾಡುತ್ತಿದ್ದಾರೆ. ಅಮಾಯಕ ಸೈನಿಕರನ್ನು ಬಲಿ ಕೊಟ್ಟ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಮಾತನಾಡಿದ್ದ ಅವರು, ದೇಶ ಕಾಯುವ ಸೈನಿಕರಿಗೆ ತೊಂದರೆ ಇದೆ. ಈ ವಿಚಾರ ಹೇಳುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಹೇಗೆ ಬಲಿದಾನವಾಗಿದ್ದು? ಅಧಿಕಾರ ಬಂದಿದ್ದು ಮೋದಿಗೆ ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು. ಸೈನಿಕರಿಗೆ ತೊಂದರೆ ಇದೆ, ಬಲಿದಾನವಾಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹಸಚಿವ ಅಮಿಶಾ ಅವರಿಗೆ ಗೊತ್ತಿಲ್ಲ ಎಂದರೆ ಇದು ಮುಟ್ಟಾಳ ಸರ್ಕಾರ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು. ಈಗ ಅವರೆ ಅವರನ್ನು ಅಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.
ದೇಶದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕೆ ಉದಾಹರಣೆ ಮಹರಾಷ್ಟ್ರದ ಸುಶೀಲ್ ಕುಮಾರ್ ಸಿಂಧೆ. ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡುವುದು ಬೇಡ. ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಸಂಪೂರ್ಣವಾಗಿ ನೆಲಕಚ್ಚಿಸಿದ್ದಾರೆ. ಇದರಿಂದ ಅವರು ಮೇಲಕ್ಕೇಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಂತಹ ಸ್ಥಿತಿಗೆ ಬಿಜೆಪಿಯವರು ತಲುಪಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ಬ್ರಿಟಿಷರು ಇದ್ದಂಗೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋಧಿ ಸರ್ಕಾರಕ್ಕೆ ಸಲ್ಲುತ್ತದೆ. ಬ್ರಿಟಿಷರ ರೀತಿಯಲ್ಲಿ ಗುಂಪು ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹಾಗಿರುವ ಬಿಎಸ್‍ಪಿ ಸ್ಥಿತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಆಗುತ್ತೆ. ಆ ರೀತಿ ಬಿಜೆಪಿಯವರು ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | DK Shivakumar : ಡಿಕೆಶಿ ಅಕ್ರಮ ಆಸ್ತಿ ಕೇಸ್; ಇಂದೇ ರಾಜ್ಯ ತನಿಖಾ ಸಂಸ್ಥೆಗೆ ಹಸ್ತಾಂತರ?
ಜೆಡಿಎಸ್‌ನವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ಥಿತ್ವವನ್ನು ಸಂಪೂರ್ಣ ಮುಗಿಸುವ ಕೀರ್ತಿ ಮುಂದಿನ ದಿನಗಳಲ್ಲಿ
ಬಿಜೆಪಿಯವರಿಗೆ ಸಲ್ಲುತ್ತದೆ. ಮುಂದಿನ ಪ್ರಧಾನಿ ಎಂಬಂತೆ ಹೊರಹೊಮ್ಮಿದ್ದ ಮಾಯಾವತಿ ಅವರನ್ನೆ ಉತ್ತರ ಪ್ರದೇಶದಲ್ಲಿ ಹೆಸರಿಲ್ಲದಂತೆ ಮಾಡಿದ್ದಾರೆ. ಕರ್ನಾಟಕದ ಕುಮಾರಣ್ಣ ಯಾವ ಲೆಕ್ಕ.? ನಮ್ಮನ್ನು ನೋಡಿದ ತಕ್ಷಣ ಬಿಜೆಪಿಯವರನ್ನು ತಬ್ಬಿಕೊಳ್ಳುತ್ತಾರೆ. ದೇವೇಗೌಡರನ್ನು ಇಳಿವಯಸ್ಸಿನಲ್ಲಿ ಕೋಮುವಾದಿ ಮಾಡಿಬಿಟ್ಟರು ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.