ಕಮಲನಗರ: ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ವಿರುದ್ಧ ಸಿಡಿದೆದ್ದಿರುವ ಔರಾದ್ ತಾಲೂಕಿನ ಬಿಜೆಪಿಯ ಹಲವು ಮುಖಂಡರು ಮಂಗಳವಾರ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ (Resign) ಸಲ್ಲಿಸಿದ್ದಾರೆ. ಚುನಾವಣೆ (Karnataka election 2023) ಹೊತ್ತಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಬಿಜೆಪಿಗೆ ಆಘಾತವನ್ನುಂಟು ಮಾಡಿದೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ದೇಶಮುಖ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸುಚಿತ್ರಾ ಹಂಗರಗಿ, ಜಿಲ್ಲಾ ಮಾಜಿ ಕಾರ್ಯಕಾರಿಣಿ ಸದಸ್ಯ, ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ ಪಾಟೀಲ ಚಾಂದೋರಿ, ಔರಾದ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಔರಾದ್ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ವರ ಪಾಟೀಲ, ಮುಖಂಡ ವಸಂತ ದೇಸಾಯಿ ಮೊದಲಾದವರು ಬಿಜೆಪಿಗೆ ರಾಜೀನಾಮೆ ನೀಡಿದವರಲ್ಲಿ ಸೇರಿದ್ದಾರೆ.
ಇ-ಮೇಲ್ ಮೂಲಕ ರಾಜೀನಾಮೆ
ಬಿಜೆಪಿ ವರಿಷ್ಠರಿಗೆ ಇ-ಮೇಲ್ ಮೂಲಕ ರಾಜೀನಾಮೆ ಪತ್ರದ ಪ್ರತಿಯನ್ನು ಕಳಿಸಿಕೊಟ್ಟಿದ್ದಾಗಿ ಕಮಲನಗರ ಪಟ್ಟಣದಲ್ಲಿ ಈ ಮುಖಂಡರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ: Congress Manifesto : ಮೀಸಲಾತಿ ಪ್ರಮಾಣ ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಳ; ಮುಸ್ಲಿಮರ ಶೇ.4 ಮೀಸಲು ಮರುಸ್ಥಾಪನೆ
ಚೌವ್ಹಾಣ್ ಮುಕ್ತ ಔರಾದ್ ತಾಲೂಕು ನಮ್ಮ ಗುರಿ
ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಪಕ್ಷ ತೊರೆದಿದ್ದೇವೆ. ಪಕ್ಷ ಹಾಗೂ ವರಿಷ್ಠರ ಬಗ್ಗೆ ಗೌರವ ಇದೆ. ಬೇರೆ ಯಾವ ಪಕ್ಷಕ್ಕೂ ಸೇರುತ್ತಿಲ್ಲ. ಪ್ರಭು ಚೌವಾಣ್ ಮುಕ್ತ ಔರಾದ್ ತಾಲೂಕು ಮಾಡುವುದೇ ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಅಸಮಾಧಾನದ ಹೊಗೆ
2008 ರಲ್ಲಿ ಪ್ರಭು ಚೌವ್ಹಾಣ್ ಅವರನ್ನು ಕ್ಷೇತ್ರಕ್ಕೆ ಕರೆ ತಂದು, ಕ್ಷೇತ್ರದಾದ್ಯಂತ ಸಂಚರಿಸಿ, ಸಂಘಟನೆ ಬಲಪಡಿಸಿ, ಅವರನ್ನು ಸತತ ಮೂರು ಬಾರಿ ಗೆಲ್ಲಿಸಿದ್ದೇವೆ. ಆದರೆ, ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಕೊಡದ ಕಾರಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲೇ ಪ್ರಭು ಚೌವಾಣ್ ಅವರ ವಿರುದ್ಧ ಅಸಮಾಧಾನದ ಹೊಗೆಯಾಗುಡುತ್ತಿದೆ ಎಂದು ತಿಳಿಸಿದರು.
ಹಿರಿತನ, ಪಕ್ಷ ನಿಷ್ಠೆ ಪರಿಗಣಿಸಿ ಪಕ್ಷ ಅಥವಾ ಸರ್ಕಾರದ ನಿಗಮ, ಮಂಡಳಿಗಳಲ್ಲಿ ಪ್ರಾತಿನಿಧ್ಯ ಕೊಡಿಸಿಲ್ಲ. ಮೂರು-ನಾಲ್ಕು ಜನರಿಗೆ ಮಾತ್ರ ಕಾಮಗಾರಿಗಳ ಗುತ್ತಿಗೆ ಕೊಡಿಸುತ್ತಿದ್ದಾರೆ. ಅದರಲ್ಲಿ ಅವರ ಪಾಲು ಇರುವುದೇ ಇದಕ್ಕೆ ಕಾರಣ. ಕಾರ್ಯಕರ್ತರ ಹಿತದ ಬಗ್ಗೆ ಚಿಂತಿಸುತ್ತಿಲ್ಲ. ಗೌರವವನ್ನೂ ಕೊಡುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಬೇರೆ ಪಕ್ಷದವರಿಗೆ ಕರೆ ತಂದು ಮಣೆ ಹಾಕಿದ್ದಾರೆ. ಆದರೆ, ಮೂಲ ಬಿಜೆಪಿಗರಿಗೆ ಈವರೆಗೂ ಆಹ್ವಾನ ನೀಡಿಲ್ಲ. ಹೀಗಾಗಿ ನಮ್ಮ ಸ್ವಾಭಿಮಾನಕ್ಕಾಗಿ ಕ್ಷೇತ್ರದಲ್ಲಿ ಬೆಳೆಸಿದ ಪಕ್ಷಕ್ಕೆ ಭಾರದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ
ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ
ಪ್ರಭು ಚೌವ್ಹಾಣ್ ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಪ್ರತಿ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗುತ್ತ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಅವರು ಗೆಲ್ಲುವುದು ಕಷ್ಟ. ಹೀಗಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಬೆಂಗಳೂರಿನಲ್ಲಿ ನಿಯೋಗದಲ್ಲಿ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೆ, ಅವರಿಗೇ ಟಿಕೆಟ್ ಕೊಡಲಾಗಿದೆ. ಹೀಗಾಗಿ ಪಕ್ಷ ಔರಾದ್ ಸ್ಥಾನ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆ
ಪ್ರಭು ಚೌವಾಣ್ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಔರಾದ್ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಲು ಕಾರಣವಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಪ್ರಸ್ತಾವ ಸಂದರ್ಭದಲ್ಲಿ ಅವರ ಸಹೋದರ ಮಾರುತಿ ಚೌವಾಣ್ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು. ಕಳೆದ ಚುನಾವಣೆಯಲ್ಲಿ ಏಕಂಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪ್ರಭು ಚೌವ್ಹಾಣ್ ಪಕ್ಷ ವಿರೋಧಿ ಚಟುವಟಿಕೆ ಮಾಡಿದರು. ಪರಿಣಾಮವಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರು. ಚೌವ್ಹಾಣ್ ಈಗ ಅವರನ್ನು ಜತೆಗೆ ತೆಗೆದುಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Congress Manifesto : ಪಂಚ ಉಚಿತ ಘೋಷಣೆಗೆ ಇನ್ನೆರಡು ಸೇರ್ಪಡೆ; ಹಳೆ ಪಿಂಚಣಿ ಜಾರಿ, ನಂದಿನಿ ರಕ್ಷಣೆ ಭರವಸೆ
ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಔರಾದ್ ತಾಲೂಕಿನ ಸಾವರಗಾಂವ್-ಹಂಗರಗಾದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುತ್ತಿದ್ದಾರೆ. ಜನರ ತೆರಿಗೆಯ ರೂ. 70 ಕೋಟಿ ಪೋಲು ಮಾಡುತ್ತಿದ್ದಾರೆ. ಜನರಿಗೆ ಇದರಿಂದ ಯಾವುದೇ ಲಾಭವಿಲ್ಲ. ಬಲ್ಲೂರದಲ್ಲಿ ಇಂಧಿರಾಗಾಂಧಿ ವಸತಿ ಶಾಲೆ ಕಾಮಗಾರಿ ಆರಂಭಿಸಿಲ್ಲ. ಜಲ ಜೀವನ ಮಿಷನ್ ಯೋಜನೆಯಲ್ಲಿ ಔರಾದ್ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ದೂರಿದರು.