Site icon Vistara News

Laxmi Hebbalkar: ಬಿಜೆಪಿ ನಾಯಕರಿಂದ ಇಡೀ ಸ್ತ್ರೀ ಕುಲಕ್ಕೆ ಅವಮಾನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

Laxmi Hebbalkar

ಬೆಳಗಾವಿ: ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮಾತನಾಡುವಾಗ ಬಿಜೆಪಿ ನಾಯಕರ ನಾಲಿಗೆ ಬಿಗಿ ಹಿಡಿತದಲ್ಲಿರಬೇಕು. ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ನನ್ನ ವಿರುದ್ಧ ನೀಡಿರುವ ಹೇಳಿಕೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಕ್ರೋಶ ಹೊರಹಾಕಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ನಿಮಿತ್ತ ಬೆಳಗಾವಿಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸಂಜಯ್ ಪಾಟೀಲ್ ನನ್ನ ವಿರುದ್ಧ ಮಾತನಾಡುವಾಗ ವೇದಿಕೆಯಲ್ಲಿದ್ದ ಹಿರಿಯ ನಾಯಕರು ಅದನ್ನು ತಡೆಯಬಹುದಿತ್ತು. ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ‌. ನನ್ನ ವಿರುದ್ಧ ಹೇಳಿಕೆಯನ್ನು ಬಿಜೆಪಿಯವರು ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರೆ ಎನಿಸುತ್ತಿದೆ. ಇದು ನನಗೆ ಮಾಡಿದ ಅಪಮಾನ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ಸಚಿವರು ಕಿಡಿ ಕಾರಿದರು.

ಇದು ಇಡೀ ಸಮಾಜಕ್ಕೆ ಮಾಡಿದ ಅಮರ್ಯಾದೆ. ಇದರಿಂದ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಅವರ ವಿರುದ್ಧ ಇಡೀ ರಾಜ್ಯದ ಮಹಿಳೆಯರು ಧಿಕ್ಕರಿಸಲು ಕರೆ ಕೊಡುವೆ ಎಂದ ಅವರು, ಇಡೀ ಸಮಾಜ ನನ್ನ ಜೊತೆಗೆ ಇದೆ. ಇಡೀ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಜೊತೆಗೆ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Lok Sabha Election 2024: ಮಹಿಳೆಯರು ದಾರಿ ತಪ್ಪಿದ ಹೇಳಿಕೆ; ಎಚ್‌ಡಿಕೆ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾದ ಕಾಂಗ್ರೆಸ್‌

ಬಿಜೆಪಿಗರು ಮಹಿಳಾ ಸಬಲೀಕರಣದ ವಿರೋಧಿಗಳು

ಬಿಜೆಪಿಗರು ಮಹಿಳಾ ಅಭಿವೃದ್ಧಿ, ಸಬಲೀಕರಣದ ವಿರೋಧಿಗಳು. ಇದಕ್ಕಾಗಿಯೇ ಹೋದಲೆಲ್ಲಾ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತುಂಬಾ ಹಿರಿಯರು, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಎಸಿ ರೂಂನಲ್ಲಿ ಕುಳಿತಿರುವ ನಿಮಗೆ ಕಷ್ಟ ಸುಖದ ಬಗ್ಗೆ ಅರಿವಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಸ್ತ್ರೀ ವಿರೋಧಿಗಳು ಎಂದು ಬಿಜೆಪಿಯವರು ನಿರೂಪಿಸಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಹಿರಿಯರು. ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ. ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದರು. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆಗಳನ್ನು ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ. ಬರೀ ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ ಎಂದು ಸಚಿವರು ಟೀಕಿಸಿದರು.

ಚಿಕ್ಕೋಡಿ, ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 135 ಸ್ಥಾನದಲ್ಲಿ ಗೆದ್ದಿದೆ‌. ಅಂತಹದರಲ್ಲೂ ಕೆಲವರು ಸರ್ಕಾರ ಬೀಳತ್ತೆ ಅಂತ ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ಮಾಜಿ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಸಮಾಜ ಪ್ರತಿಕ್ರಿಯೆ ಕೊಟ್ಟಿದೆ. ನಾನು ಚುನಾವಣೆ ಮುಗಿದ ಬಳಿಕ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸಚಿವರ ವಿರುದ್ಧದ ಹೇಳಿಕೆಗೆ ಖಂಡನೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಕಿಡಿಕಾರಿದ್ದಾರೆ. ಇಂಥ ಹೇಳಿಕೆಗಳನ್ನು ಯಾಕೆ ಬಿಜೆಪಿಯವರು ಖಂಡಿಸುವುದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಯವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶಾಸಕರು ಹೇಳಿದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಭಾರತರತ್ನ ಬಾಬಾ‌‌ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಬೆಳಗಾವಿಯ ಅಂಬೇಡ್ಕರ್ ಗಾರ್ಡನ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಲಾರ್ಪಣೆ ಮಾಡಿದರು.

ಇದನ್ನೂ ಓದಿ | Belagavi News: ಹೆಬ್ಬಾಳ್ಕರ್‌ ಅವಹೇಳನ; ಸಂಜಯ್ ಪಾಟೀಲ್ ವಿರುದ್ಧ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ

ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್, ಮಲ್ಲೇಶ್ ಚೌಗಲೆ, ಸಿದ್ದಪ್ಪ ಕಾಂಬ್ಲೆ, ಕಲ್ಲಪ್ಪ ರಾಮ್ ಚನ್ನವರ್, ಮಹೇಶ್ ಕೋಲ್ಕರ್, ಸಮತಾ ಸೈನಿಕ ದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version