ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Election) ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಶಾಸಕ ಸುಕುಮಾರ ಶೆಟ್ಟಿ ಅವರ ಒಂದು ನಡೆ ಪಕ್ಷದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ವೇದಿಕೆಯಲ್ಲೇ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆಗಿದ್ದೇನು?
ಸಮಾವೇಶದ ವೇಳೆ ಸುಕುಮಾರ ಶೆಟ್ಟಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕೈಯಲ್ಲಿ ವೈಯಕ್ತಿಕವಾದ ಒಂದು ಫೋಟೊ ಮತ್ತು ಕೈಪಿಡಿಯನ್ನು ಬಿಡುಗಡೆ ಮಾಡಿಸಿಕೊಂಡಿದ್ದೇ ಹಿರಿಯರು ಗರಂ ಆಗಲು ಕಾರಣ.
ಸಮಾವೇಶದಲ್ಲಿ ಜೆಪಿ ನಡ್ಡಾ ಅವರನ್ನು ಕ್ಷೇತ್ರದ ಜನತೆ ಪರವಾಗಿ ಸನ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಸುಕುಮಾರ ಶೆಟ್ಟಿ ಅವರು ತಮ್ಮ ಸ್ವಂತದ್ದೊಂದು ದೊಡ್ಡ ಗಾತ್ರದ ಚಿತ್ರ ಮತ್ತು ಕೈಪಿಡಿಯನ್ನೂ ಜೆ.ಪಿ. ನಡ್ಡಾ ಅವರ ಕೈಯಲ್ಲಿ ಬಿಡುಗಡೆ ಮಾಡಿಸಿಕೊಂಡಿದ್ದರು. ಸರಕಾರದ ಕೈಪಿಡಿ ಬದಲಿಗೆ ಶಾಸಕರ ವೈಯಕ್ತಿಕ ಕೈಪಿಡಿ ಬಿಡುಗಡೆ ನೋಡಿ ಆಗಲೇ ನಾಯಕರು ಗರಂ ಆದರು.
ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ವೇದಿಕೆಯಲ್ಲೇ ಸುಕುಮಾರ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡದರು. ಈ ರೀತಿ ಎಲ್ಲ ಮಾಡಬಾರದು ಎಂಬರ್ಥದಲ್ಲಿ ಅವರು ಸೂಚನೆ ಕೊಟ್ಟಂತೆ ಕಾಣುತ್ತಿದೆ. ಆಗ ಸುಕುಮಾರ ಶೆಟ್ಟಿ ಅವರು ಕೈ ಮುಗಿಯುವ ಸನ್ನಿವೇಶವಿದ್ದು, ಇದೊಂದೇ ಎಂದು ಹೇಳುವಂತೆ ಭಾಸವಾಗುತ್ತಿದೆ.
ಸದ್ಯ ಈ ವಿಡಿಯೋ ಕ್ಷೇತ್ರದಾದ್ಯಂತ ವೈರಲ್, ಶಾಸಕರ ಕಾರ್ಯಕ್ಕೆ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಮ್ಮ ಕ್ಷೇತ್ರಕ್ಕೆ ಬಂದಾಗ ಈ ರೀತಿ ಮಾಡಿದರೆ ಹೇಗೆ ತಪ್ಪಾಗುತ್ತದೆ ಎಂದು ಶಾಸಕರ ಅಭಿಮಾನಿಗಳೂ ಕೇಳುತ್ತಿದ್ದಾರೆ.
ಸುಕುಮಾರ ಶೆಟ್ಟಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುತ್ತದೋ ಇಲ್ಲವೋ ಎನ್ನುವ ಚರ್ಚೆಗಳ ನಡುವೆಯೇ ಇಂಥ ಘಟನೆ ನಡೆದಿದೆ. ಸುಕುಮಾರ ಶೆಟ್ಟಿ ಅವರು ಈ ಹಿಂದೆ ಸಮುದ್ರ ಸ್ನಾನಕ್ಕೆ ತೆರಳಿದ್ದಾಗ ಪಂಚೆ ಜಾರಿ ಮುಜುಗರ ಅನುಭವಿಸಿದ ವಿಡಿಯೊ ವೈರಲ್ ಆಗಿತ್ತು. ಅದರ ಜತೆಗೇ ಮುಸ್ಲಿಂ ಮುಖಂಡರ ಕಾಲಿಗೆ ಬಿದ್ದ ವಿಡಿಯೊ ಕೂಡ ವೈರಲ್ ಆಗಿ ಚರ್ಚೆಯಾಗಿತ್ತು. ಬಿಜೆಪಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್ ಕುರಿತು ಜೆ.ಪಿ. ನಡ್ಡಾ ಟೀಕೆ