ಬೆಂಗಳೂರು: ವಿಜಯನಗರ ನೂತನ ಎಸ್‌ಪಿ ಕಚೇರಿ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸಿರುವುದಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸಿದ್ದರಾಮಯ್ಯ ಅವರು ಬೇಡವೆಂದರೂ ಟೋಪಿ ಹಾಕಿಕೊಳ್ಳುತ್ತಾರೆ, ಆದರೆ, ಕುಂಕುಮ ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್. ಅಶೋಕ್ ಅವರು, ಕುಂಕುಮ ಹಾಕಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಾರೆ. ಸಿದ್ದರಾಮಯ್ಯಗೆ ಟಿಪ್ಪು ಮೈತುಂಬ ತುಂಬಿಕೊಂಡಿದ್ದಾನೆ. ಟೋಪಿಯನ್ನು ಬೇಡ ಎಂದರೂ ಹಾಕಿಕೊಳ್ಳುತ್ತಾರೆ. ಕುಂಕುಮ ಹಾಕಿಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ಆದರೆ ಕೇಸರಿ ಪೇಟ ಕಿತ್ತು ಬಿಸಾಡುತ್ತಾರೆ. ಸಿದ್ದರಾಮಯ್ಯ ಹೃದಯದ ತುಂಬಾ ಟಿಪ್ಪು ಇದ್ದಾನೆ. ಅವರು ನಾಮ ಇಡದಿದ್ದರೆ ಏನೂ ತೊಂದರೆ ಇಲ್ಲ. ಮೊದಲು ಹೃದಯದಲ್ಲಿ ರಾಮನ ಇಟ್ಕೊಳ್ಳಿ. ನಂತರ ಹಣ ಬಿಡುಗಡೆ ಮಾಡಿ ಆಗ್ರಹಿಸಿದ್ದಾರೆ.
ಇವರಿಗೆ ಮಂಗಳಕರವಾದದ್ದು ಯಾವುದು ಬೇಡ: ಸಿ.ಟಿ.ರವಿ
ಹಿಂದುಗಳು ಯಾರೂ ಕೂಡ ಕುಂಕುಮ ಬೇಡ, ವಿಭೂತಿ ಬೇಡ ಅಂತ ಹೇಳುವುದಿಲ್ಲ. ಇವರು ಕುಂಕುಮ ಬೇಡ ಎನ್ನುವ ಅನ್ನೋ ಹಿಂದುನಾ? ಮಾತೆತ್ತಿದರೆ ನಾನು ಹಿಂದು ಎನ್ನುತ್ತಾರೆ. ನಮ್ಮ ತಂದೆ ಹೆಸರಲ್ಲಿ ರಾಮ ಇದೆ ಎನ್ನುತ್ತಾರೆ. ಕುಂಕುಮ ಮಂಗಳ ಸೂಚಕ, ಇದನ್ನು ಬೇಡ ಅಂತ ಸಿದ್ದರಾಮಯ್ಯಗೆ ಅನ್ನಿಸೋದು ಯಾಕೆ? ಮಂಗಳಕರವಾದದ್ದು ಇವರಿಗೆ ಯಾವುದು ಬೇಡ, ಇವರಿಗೆ ಬೇಕಿರೋದು ಅಮಂಗಳ ಕಾರವಾದದ್ದೇ ಎಂದು ಮಾಜಿ ಸಚಿವ ಸಿ.ಟಿ.ರವಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಕುಂಕುಮ ಹಚ್ಚಬೇಡಿ, ಟೋಪಿ ತಂದು ಹಾಕಿ
ಹುಬ್ಬಳ್ಳಿ: ಸಿದ್ದರಾಮಯ್ಯ ಹಣೆಗೆ ಕುಂಕುಮ ಹಚ್ಚಿಕೊಳ್ಳಲ್ಲ. ಹೀಗಾಗಿ ಸಿದ್ದರಾಮಯ್ಯ ಎಲ್ಲೆಲ್ಲಿ ಹೋಗ್ತಾರೆ ಅಲ್ಲಿ, ದಯವಿಟ್ಟು ಕುಂಕುಮ ಹಚ್ಚಬೇಡಿ, ಎಲ್ಲರೂ ಒಂದೊಂದು ಟೋಪಿ ತಂದು ಹಾಕಿ ಎಂದು ರಾಜ್ಯದ ಜನರಿಗೆ ನಾನು ವಿನಂತಿ ಮಾಡುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯರಿಂದ ಅಲ್ಪಸಂಖ್ಯಾತರ ಓಲೈಕೆ: ಶಾಸಕ ಯಶ್ ಪಾಲ್ ಸುವರ್ಣ
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ದೇಶ ವಿರೋಧಿ, ಹಿಂದು ವಿರೋಧಿ ನೀತಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದಾರೆ. ಕುಂಕುಮ ಕೊಡಲು ಬಂದಾಗ ಅದನ್ನು ಸಿದ್ದರಾಮಯ್ಯ ತಡೆದಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿದ್ದಾರಾ? ಪಾಕಿಸ್ತಾನದಲ್ಲಿದ್ದಾರಾ ಎಂಬ ಸಂಶಯವಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಸಿಎಂ ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Hanuman Flag: ಕೆರಗೋಡು ಗ್ರಾಮದಲ್ಲಿ ಮನೆ ಮನೆ ಮೇಲೂ ಕೇಸರಿ ಧ್ವಜ ಅಭಿಯಾನ
ಸಿದ್ದರಾಮಯ್ಯ -ಡಿಕೆಸು ನಿವೃತ್ತಿ ಜೀವನವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕಳೆಯುವ ಯೋಚನೆ ಮಾಡಿರಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.