ದಾವಣಗೆರೆ: ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಮಂತ್ರಿಗಳು ಹಣ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇದು ೪೦% ಕಮಿಷನ್ ಸರಕಾರ ಎನ್ನುವುದು ಆಗಲೇ ಸಾಬೀತಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದ ಮೂಲೆಮೂಲೆಯಿಂದ ಲಕ್ಷಾಂತರ ಜನರು ಬಂದಿದ್ದಾರೆ. ಇದು ಕಾಂಗ್ರೆಸ್‌ನ ಶಕ್ತಿ ಮತ್ತು ಸಿದ್ದರಾಮಯ್ಯ ಅವರ ಶಕ್ತಿ ಎಂದು ಹೇಳಿದರು. ಕರ್ನಾಟಕದ ಜನತೆ ಈಗ ಎಚ್ಚೆತ್ತುಕೊಂಡಿದ್ದಾರೆ. ಕಳೆದ 5 ವರ್ಷ ಸಿದ್ದರಾಮಯ್ಯ ಉತ್ತಮ ಆಡಳಿತ ಕೊಟ್ಟಿದ್ದು ಈಗ ಅವರಿಗೆ ಅರಿವಾಗಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆ
ಇದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು.
ʻʻಈಗ ಭ್ರಷ್ಟಾಚಾರ, 40 ಪರ್ಸೆಂಟ್ ಸರ್ಕಾರವಿದೆʼʼ ಎಂದ ಕೆಸಿವಿ, ಕಾಂಗ್ರೆಸ್, ಬಿಜೆಪಿ ಸರ್ಕಾರ ಹೇಗಿತ್ತು ಎಂದು ನೋಡಿ. ಈಗಿನ ಸಚಿವರು ಹಣ ಮಾಡೋದರಲ್ಲಿ ನಿಸ್ಸೀಮರಾಗಿದ್ದಾರೆ. ರಾಜ್ಯದ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರು.
ʻʻನಮ್ಮ ನಾಯಕರಾಗಿರುವ ರಾಹುಲ್ ಗಾಂಧಿ ಅವರನ್ನು ಐದು ದಿನಗಳ ಕಾಲ ಇ.ಡಿ. ವಿಚಾರಣೆ ನಡೆಸಿತು. ಆದರೆ, ಅವರು ಯಾವುದಕ್ಕೂ ಹೆದರದೆ ಜಗ್ಗದೆ ಕಾಂಗ್ರೆಸ್‌ನ ಶಕ್ತಿ ಏನೆಂಬುದನ್ನು ತೋರಿಸಿದರು.ʼʼ ಎಂದು ಹೇಳಿದರು.
ಸಿದ್ದು-ಡಿಕೆಶಿಗೆ ಶ್ಲಾಘನೆ
ʻʻಸಿದ್ದರಾಮಯ್ಯ ಮ್ಯಾನ್ ಆಫ್ ಐಡಿಯಾಲಜಿ. ಒಳ್ಳೆಯ ನಾಯಕರು, ಒಳ್ಳೆಯ ಪಾರ್ಟಿಯಿಂದ ಬರುತ್ತಾರೆ.
ಅದಕ್ಕೆ ಸಾಕ್ಷಿ ಸಿದ್ದರಾಮಯ್ಯʼʼ ಎಂದು ಹೇಳಿದರು ಕೆ.ಸಿ.ವೇಣುಗೋಪಾಲ್.
ʻʻಕರ್ನಾಟಕ ಕಾಂಗ್ರೆಸ್‌ನಲ್ಲಿ ಡೈನಾಮಿಕ್ ಅಧ್ಯಕ್ಷರಿದ್ದಾರೆ. ಇಂತಹ ನಾಯಕರನ್ನು ನಾನು ಯಾವ ಪಕ್ಷದಲ್ಲೂ ನೋಡಿಲ್ಲ. ಯಾವ ರಾಜ್ಯದಲ್ಲಿಯೂ ಇಂತಹ ನಾಯಕರನ್ನು ನೋಡಿಲ್ಲʼʼ ಎಂದು ಡಿಕೆಶಿಯನ್ನು ಹೊಗಳಿದರು.
ʻʻ2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ, ಒಟ್ಟಾಗಿ ಮುಂದೆ ಸಾಗೋಣ. ಒಂದೇ ಉದ್ದೇಶದಿಂದ ನಾವು ಮುಂದೆ ಸಾಗೋಣ. ಕಾಂಗ್ರೆಸ್, ರಾಹುಲ್ ಗಾಂಧಿ ನಿಮಗೆ ಬೆಂಬಲವಾಗಿ ನಿಲ್ತಾರೆʼʼ ಎಂದು ಹೇಳಿದರು ವೇಣುಗೋಪಾಲ್.
ಇದನ್ನೂ ಓದಿ| ಡಿಕೆಶಿ-ಸಿದ್ದರಾಮಯ್ಯ ಒಗ್ಗಟ್ಟಿನ ಶಕ್ತಿ ರಾಜ್ಯದ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದೆ ಎಂದ ರಾಹುಲ್ ಗಾಂಧಿ