Site icon Vistara News

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

BJP MLA Shivaram Hebbar welcomes CM, Deputy CM by putting up flexes

ಕಾರವಾರ: ರಾಜ್ಯಸಭಾ ಚುನಾವಣೆ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಅವರು, ಇದೀಗ ಕದಂಬೋತ್ಸವ ಹಿನ್ನೆಲೆಯಲ್ಲಿ (Banavasi Kadambotsava) ಫ್ಲೆಕ್ಸ್‌ ಹಾಕಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ರಿಗೆ ಭರ್ಜರಿ ಸ್ವಾಗತ ಕೋರಿರುವುದು ಕಂಡುಬಂದಿದೆ. ಬನವಾಸಿಯಾದ್ಯಂತ ಹೆಬ್ಬಾರ್‌ (Shivaram Hebbar) ಅವರ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅಡ್ಡಮತದಾನ ಮಾಡಿದ್ದರು. ಜತೆಗೆ ಶಾಸಕ ಶಿವರಾಂ ಹೆಬ್ಬಾರ್ ಅವರು ಅನಾರೋಗ್ಯವೆಂದು ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಆಘಾತ ನೀಡಿದ್ದರು. ಹೀಗಾಗಿ ಈ ಇಬ್ಬರು ಶಾಸಕರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಸಿಎಂ ಮತ್ತು ಡಿಸಿಎಂ ಅವರಿಗೆ ಫ್ಲೆಕ್ಸ್‌ಗಳ ಮೂಲಕ ಶಾಸಕ ಶಿವರಾಮ್‌ ಹೆಬ್ಬಾರ್ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ | HD Devegowda: ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿಎಂ ಸಿದ್ದರಾಮಯ್ಯಗೆ ಎಚ್‌.ಡಿ. ದೇವೇಗೌಡ ಪ್ರಶ್ನೆ

ಇತ್ತೀಚೆಗೆ ಕಾಂಗ್ರೆಸ್‌ ನಾಯಕರ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೂಡ, ಶಾಸಕರು ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾರೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

ಶಿರಸಿ: ಶಾಸಕರಾದ ಎಸ್.ಟಿ. ಸೋಮಶೇಖರ್ (ST Somashekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು (Congress party ideology) ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್‌ ಹಾಗೂ ಗೈರಾದ ಶಿವರಾಂ ಹೆಬ್ಬಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು.

Exit mobile version