ಯಾದಗಿರಿ: ಒಂದು ಕಡೆ ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಣೆಗೆ ಭರದ ಸಿದ್ಧತೆ ನಡೆಯುತ್ತಿರುವಂತೆಯೇ ಸುರಪುರದ ಬಿಜೆಪಿ ಶಾಸಕ ರಾಜೂಗೌಡ ಅವರ ಚಿತ್ರ ಬ್ಯಾನರ್ ಮತ್ತು ಕಾರಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಸುರಪುರದಲ್ಲಿ ಹಾಕಿರುವ ಬ್ಯಾನರ್ನಲ್ಲಿ ಅಭಿಮಾನಿಗಳು ಬಿಜೆಪಿ ಶಾಸಕ ರಾಜೂ ಗೌಡ ಅವರ ಚಿತ್ರವನ್ನು ಹಾಕಿದ್ದಾರೆ. ಜತೆಗೆ ಕಾರುಗಳ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ ಅಂಟಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ನಿಮಿತ್ತ ಕಾಂಗ್ರೆಸ್ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹೋಗಲು ನಿರ್ಧರಿಸಿರುವ ಶಾಸಕ ರಾಜೂ ಗೌಡ ಅಭಿಮಾನಿಗಳು ಕಾರಿಗೆ ರಾಜೂಗೌಡರ ಫೋಟೊವನ್ನು ಹಾಕಿಕೊಂಡಿದ್ದಾರೆ.
ಈ ಅಭಿಮಾನಿಗಳು ಏಕಕಾಲದಲ್ಲಿ ಸಿದ್ದರಾಮಯ್ಯ ಮತ್ತು ಶಾಸಕ ರಾಜೂಗೌಡ ಅವರ ಅಭಿಮಾನಿಗಳು ಹೇಳಲಾಗಿದೆ. ಹೀಗಾಗಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
ನನ್ನ ಫೋಟೊ ಬಳಸಬೇಡಿ ಎಂದ ರಾಜೂ ಗೌಡ
ʻʻಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗುವವರು ನನ್ನ ಪೊಟೋ ಬಳಸಬೇಡಿ. ಇದರಿಂದ ಪಕ್ಷಕ್ಕೂ ಹಾಗೂ ನನಗೆ ಮುಜುಗರವಾಗುತ್ತದೆʼʼ ಎಂದು ಶಾಸಕ ರಾಜೂ ಗೌಡ ಅವರು ಮನವಿ ಮಾಡಿದ್ದಾರೆ.
ವಿದ್ಯಮಾನವನ್ನು ಕೂಲಾಗೇ ತೆಗೆದುಕೊಂಡಿರುವ ಶಾಸಕರು, ʼʼಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಯಾರಾದ್ರು ಹೋಗಿ ಅದಕ್ಕೆ ಅಭ್ಯಂತರವಿಲ್ಲ. ನಾನು ಕೂಡ ಸಿದ್ದರಾಮಯ್ಯ ನವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತೇನೆ. ಆದರೆ. ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷದಡಿ ನಡೆಯುತ್ತಿರುವ ಕಾರ್ಯಕ್ರಮ. ಕಾಂಗ್ರೆಸ್ ಕಾರ್ಯಕ್ರಮಕ್ಕೆ ನಮ್ಮ ಫೋಟೊ ಬಳಸುವುದರಿಂದ ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆʼʼ ಎಂದಿದ್ದಾರೆ.
ಪಕ್ಷಕ್ಕೆ ಮೋಸ ಮಾಡಲ್ಲ ಎಂದರು
ಇದೇ ವೇಳೆ, ಅವರೇನಾದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಸಾಧ್ಯತೆ ಇದೆಯೇ ಎಂಬ ಗುಮಾನಿಯೂ ಇದೆ. ಆದರೆ, ರಾಜೂಗೌಡ ಅವರು, ʻʻಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ. ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಪಕ್ಷ ನನ್ನನ್ನು ಮಂತ್ರಿ ಮಾಡಿದೆ. ನಿಗಮ-ಮಂಡಳಿ ಅಧ್ಯಕ್ಷತೆ ಸೇರಿದಂತೆ ಹಲವಾರು ಅವಕಾಶ ಕೊಟ್ಟಿದೆ. ಹೀಗಾಗಿ ದಯವಿಟ್ಟು ಅಭಿಮಾನಿಗಳು ಕಾಂಗ್ರೇಸ್ ಪಕ್ಷದಡಿ ನಡೆಯುವ ಕಾರ್ಯಕ್ರಮದಲ್ಲಿ ನನ್ನ ಫೋಟೊ ಬಳಸಬೇಡಿʼʼ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ| ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ: ಬೀದರ್ನಿಂದ ವಿಶೇಷ ರೈಲು ಬಿಟ್ಟ ಇಲಾಖೆ