ಕಾರವಾರ: ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಿಶಾ ಸಭೆಗೆ ಆಗಮಿಸಿದ್ದ ಸಂಸದ ಅನಂತಕುಮಾರ ಹೆಗಡೆ (BJP MP Anantkumar Hegde) ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Congress MLA Satish Sail) ಅವರನ್ನು ಅಪ್ಪಿಕೊಂಡು ಅಭಿನಂದಿಸಿದ್ದಾರೆ. ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇವರಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ವಲಯದಲ್ಲಿ ಬಹು ಚರ್ಚೆಯನ್ನುಂಟು ಮಾಡಿದೆ.
ದಿಶಾ ಸಭೆಯ ಬಳಿಕ ಸಂಸದ ಅನಂತಕುಮಾರ ಹೆಗಡೆ ತಮ್ಮ ಕಾರಿನಲ್ಲೇ ಸತೀಶ್ ಸೈಲ್ ಅವರನ್ನು ಸರ್ಕ್ಯೂಟ್ ಹೌಸ್‌ಗೆ ಊಟಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಸತೀಶ ಸೈಲ್, ಶಿವರಾಮ್ ಹೆಬ್ಬಾರ್, ಎಂಎಲ್‌ಸಿ ಗಣಪತಿ ಉಳ್ವೇಕರ ಎಲ್ಲರೂ ಐಬಿಯಲ್ಲಿ ಜತೆಯಾಗಿ ಊಟ ಮಾಡಿ ಸುಮಾರು ಒಂದೂವರೆ ಗಂಟೆಯ ತನಕ ಉಭಯ ಕುಶಲೋಪರಿ ಮಾತನಾಡಿದ್ದಾರೆ.
ಇದನ್ನೂ ಓದಿ: Weather Report: ಕರಾವಳಿಯಲ್ಲಿ ನಿರಂತರ ಜೋರು ಮಳೆ; ಕೆಸರಲ್ಲಿ ಸಿಲುಕಿದ ಬಸ್
ಸತೀಶ್ ಸೈಲ್ ಮತ್ತು ಸಂಸದ ಅನಂತ್ ಕುಮಾರ್ ಹೆಗಡೆ ಸಖ್ಯ, ಶಾಸಕಿ ರೂಪಾಲಿ ನಾಯ್ಕರನ್ನು ರಾಜಕೀಯ ಖೆಡ್ಡಾದಲ್ಲಿ ನೂಕುವ ಒಂದು ಪ್ರಯತ್ನವೇ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಅನಂತ್ ಕುಮಾರ್ ಹೆಗಡೆಗೆ ಈ ಹಿಂದೆ ಸತೀಶ್ ಸೈಲ್ ಅವರು ಲೋಕಸಭಾ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಲ್ಲದೆ, ಬಾಹ್ಯ ಬೆಂಬಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇದೆ. ಈ ಬಾರಿ ಸತೀಶ್ ಸೈಲ್ ಗೆಲುವಿನಲ್ಲಿ ಏನಾದರೂ ಅನಂತಕುಮಾರ್ ಹೆಗಡೆಯವರ ಪಾತ್ರ ಇದೆಯೇ? ಎಂಬ ನಿಟ್ಟಿನಲ್ಲಿಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.
ಹಾಗೆಯೇ ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರು ಸ್ಪರ್ಧೆ ಮಾಡುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಇತ್ತೀಚೆಗೆ ಅವರು ಬಹಳ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಸ್ಪರ್ಧೆ ಮಾಡುವ ಉಮೇದನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಈ ಅಪ್ಪುಗೆಯು ಮುಂದೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿ ಸಭೆಗೇ ಬಾರದ ಅನಂತ
ಬಿಜೆಪಿ ಸಂಘಟನೆ ದೃಷ್ಟಿಯಿಂದ ಹಾಗೂ ಚುನಾವಣೆ ಬಳಿಕ ಪ್ರಮುಖರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಸಭೆ ನಡೆಸುತ್ತಾ ಬರುತ್ತಿದ್ದಾರೆ. ಇದರ ಭಾಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಹೊನ್ನಾವರದಲ್ಲಿ ಮಹತ್ವದ ಬಿಜೆಪಿ ಸಂಘಟನೆ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ, ಇದಕ್ಕೆ ಅನಂತಕುಮಾರ ಹೆಗಡೆ ಅವರು ಭಾಗವಹಿಸಲೇ ಇಲ್ಲ. ಬದಲಾಗಿ ಕಾರವಾರಕ್ಕೆ ಬಂದು ಈ ದಿಶಾ ಸಭೆಯಲ್ಲಿ ಭಾಗವಹಿಸಿ ತಣ್ಣಗೆ ಕುಳಿತಿದ್ದರು. ಬಳಿಕ ಯಲ್ಲಾಪುರದಲ್ಲಿ ನಡೆದ ಸಭೆ ಕಡೆಗೂ ಸಂಸದರು ಮುಖ ಹಾಕಲಿಲ್ಲ. ಆದರೆ, ಆ ಮೀಟಿಂಗ್‌ಗೆ ಅಲ್ಲಿನ ಶಾಸಕ ಶಿವರಾಮ ಹೆಬ್ಬಾರ ಅವರು ಕಾರವಾರದಿಂದ ತೆರಳಿ ಮಧ್ಯಾಹ್ನ ಭಾಗಿಯಾಗಿದ್ದರು.
ಇದನ್ನೂ ಓದಿ: Rain News: ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ; ಇಂದು ಮಳೆಯಾಗದಿದ್ದರೆ ನಾಳೆಯೂ ಅಲ್ಲಾಗೆ ಮೊರೆ
ಈಗ ಅನಂತಕುಮಾರ್ ಹೆಗಡೆ ಅವರು ಬಿಜೆಪಿ ಪ್ರಮುಖರನ್ನೊಳಗೊಂಡ ಸಭೆಗೆ ಗೈರಾಗಿರುವುದು ಸಹ ಚರ್ಚೆಗೆ ಗ್ರಾಸವಾಗುತ್ತಿದೆ.
ಕ್ಷಣ ಕ್ಷಣದ ಸುದ್ದಿಗಾಗಿ ಈ ಲೈವ್ ಲಿಂಕ್ ಮೇಲೆ ಕ್ಲಿಕ್ ಮಾಡಿ