Site icon Vistara News

BJP National Executive Meeting | ಜನವರಿ 16ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಬಿಎಸ್‌ವೈ, ಬೊಮ್ಮಾಯಿ ಭಾಗಿ

BJP national executive meeting

ಬೆಂಗಳೂರು/ನವದೆಹಲಿ: ಸೋಮವಾರದಿಂದ (ಜನವರಿ 16) ದೆಹಲಿಯಲ್ಲಿ ಎರಡು ದಿನ ಬಹು ನಿರೀಕ್ಷಿತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP National Executive Meeting) ನಡೆಯಲಿದ್ದು, ಹಲವು ವಿಷಯಗಳು ಚರ್ಚೆಗೆ ಬರಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಡಿಎಂಸಿ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸಭೆ ನಡೆಯಲಿದ್ದು, ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಇದಾದ ಬಳಿಕವೇ ಸಭೆ ಆರಂಭವಾಗಿದ್ದು, ನಿರ್ಧಾರಗಳು ಹಾಗೂ ನಿರ್ಣಯಗಳ ದೃಷ್ಟಿಯಿಂದ ಮಂಗಳವಾರದ ಸಭೆಯು ಪ್ರಮುಖವಾಗಿದೆ. ಸೋಮವಾರದ ಸಭೆಯಲ್ಲಿ ಬಿ.ಎಸ್.‌ಯಡಿಯೂರಪ್ಪ ಹಾಗೂ ಮಂಗಳವಾರದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚರ್ಚೆಗೆ ಬರುವ ವಿಷಯಗಳು ಯಾವವು?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿಯು ಇದೇ ತಿಂಗಳು ಮುಗಿಯಲಿದೆ. ಅವರ ಅಧಿಕಾರದ ಅವಧಿಯನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮುಂದುವರಿಸಬೇಕೋ ಅಥವಾ ಬೇರೆಯವರನ್ನು ನೇಮಿಸಬೇಕೋ ಎಂಬುದು ಕಾರ್ಯಕಾರಿಣಿಯ ಪ್ರಮುಖ ವಿಷಯವಾಗಿದೆ. ಹಾಗೆಯೇ, 2024ರ ಲೋಕಸಭೆ ಚುನಾವಣೆ, ಕೇಂದ್ರ ಸಂಪುಟ ಪುನರ್‌ರಚನೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಕುರಿತು ಕೇಂದ್ರ ನಾಯಕರ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಒಬಿಸಿ, ರಾಮಮಂದಿರ, ಮನೆ ಮನೆ ಭೇಟಿ, 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಣತಂತ್ರ ಹೇಗಿದೆ?

Exit mobile version