ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಗೆಬಗೆಯ ಅಸ್ತ್ರ ಪ್ರಯೋಗ ಮಾಡುತ್ತಿರುವ ಬಿಜೆಪಿ (Siddaramaiah VS BJP) ಈಗ ಹೊಸದೊಂದು ಅಸ್ತ್ರ ರೆಡಿ ಮಾಡಿದೆ. ಅದುವೇ ಒಂದು ಪುಸ್ತಕ!
ಹೌದು, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೇ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಎಂದು ನಿರ್ಧರಿಸಿರುವ ಕಮಲ ಪಾಳಯ ತನ್ನ ಸೈದ್ಧಾಂತಿಕ ನೆಲೆಗಳ ಮೂಲಕ ಅವರನ್ನು ಹಣಿಯುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಭಾಗವಾಗಿ ಡಿಸೆಂಬರ್ ೯ರ ಸೋಮವಾರ ಒಂದು ಪುಸ್ತಕ ಬಿಡುಗಡೆಯಾಗಲಿದೆ. ಅದುವೇ ʻಸಿದ್ದು ನಿಜ ಕನಸುಗಳುʼ! ಸಿದ್ದರಾಮಯ್ಯ ಅವರು ಹಿಂದು ವಿರೋಧಿ ಎಂದು ಬಿಂಬಿಸುವ ಪ್ರಯತ್ನವಾಗಿ ಈ ಪುಸ್ತಕ ಸಿದ್ಧಪಡಿಸಿದಂತೆ ಕಾಣುತ್ತಿದೆ.
ಸಿದ್ದರಾಮಯ್ಯ ಮತ್ತು ಟಿಪ್ಪು ಸುಲ್ತಾನ್ ಅವರನ್ನು ಹೋಲಿಕೆ ಮಾಡಿ ಈ ಪುಸ್ತಕ ಬರೆದಂತೆ ಕಾಣುತ್ತಿದೆ. ಈ ಹಿಂದೆ ʻಟಿಪ್ಪು ನಿಜ ಕನಸುಗಳುʼ ಎಂಬ ನಾಟಕವನ್ನು ಬರೆದಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಬರೆದಿದ್ದರು. ಈ ಪುಸ್ತಕ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ಪುಸ್ತಕದ ಹೋಲಿಕೆಯಲ್ಲಿ ʻಸಿದ್ದು ನಿಜ ಕನಸುಗಳುʼ ಪುಸ್ತಕ ಸಿದ್ಧವಾಗಿದೆ. ಪುಸ್ತಕದ ಮುಖಪುಟ ಕೂಡಾ ಒಂದೇ ರೀತಿಯಲ್ಲಿರುವಂತೆ ಕಾಣುತ್ತಿದೆ.
ಸೋಮವಾರ ಮಧ್ಯಾಹ್ನ ಬಿಡುಗಡೆ
ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿಎನ್ ಅಶ್ವಥನಾರಾಯಣ್, ಬಿಜೆಪಿ ಮೇಲ್ಮನೆ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬರಹಗಾರ ರೋಹಿತ್ ಚಕ್ರತೀರ್ಥ, ಸಂತೋಷ್ ತಮ್ಮಯ್ಯ, ಸಂವಾದದ ವೃಷಾಂಕ ಭಟ್, ರಾಕೇಶ್ ಶೆಟ್ಟಿ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ.
ಅಂದಿನ ಟಿಪ್ಪು ಈಗಿನ ಸಿದ್ದುವೇ? ತಿಳಿದುಕೊಳ್ಳುವ ಆಸಕ್ತಿ ಇದೆಯೇ ತಪ್ಪದೆ ಓದಿ ಎಂದು ಪೋಸ್ಟರ್ ಮಾಡಿ ಪ್ರಚಾರ ಮಾಡಲಾಗಿದೆ.
ಇದನ್ನೂ ಓದಿ | Siddaramaiah | ನಾನು ಹಿಂದು ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಮಾಜಿ ಸಿಎಂ ಸಿದ್ದರಾಮಯ್ಯ