ವಿಜಯಪುರ: ಶ್ರೀ ಸಿದ್ದೇಶ್ವರ ಶ್ರೀಗಳು ಬೆಳೆಸಿದ ಶ್ರೀ ಜ್ಞಾನಯೋಗಾಶ್ರಮ ಅಧ್ಯಾತ್ಮಿಕತೆ ಮತ್ತು ಮಾನವೀಯತೆಯ ಸಂಗಮ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಹೇಳಿದರು. ವಿಜಯಪುರದ ಸಿಂಧಗಿಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಉದ್ಘಾಟನೆಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದರು. ತಮ್ಮ ಪ್ರವಚನಗಳ ಮೂಲಕ, ನಡೆ ನುಡಿಗಳ ಮೂಲಕ ಜನರನ್ನು ಸನ್ಮಾರ್ಗದೆಡೆಗೆ ಕರೆದೊಯ್ದ ಇತ್ತೀಚೆಗೆ ನಿಧನರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ನಡ್ಡಾ ಗೌರವಾರ್ಪಣೆ ಸಲ್ಲಿಸಿದರು.
ವಿಜಯಪುರದ ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ಜೆ.ಪಿ ನಡ್ದಾ ಅವರು ಆಶ್ರಮದ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ಇತರೆ ಮುಖಂಡರು ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿರಚಿತ ಇಂಗ್ಲಿಷ್ ಭಾಷೆಯ ಪುಸ್ತಕವನ್ನು ನೀಡಿದರು.
ಪುಸ್ತಕ ಸ್ಚೀಕರಿಸಿ ಮಾತನಾಡಿದ ಜೆ ಪಿ ನಡ್ಡಾ ಅವರು, ಸಿದ್ದೇಶ್ವರ ಸ್ವಾಮೀಜಿ ಅವರು ಜಾಗೃತ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ನಡೆ ನುಡಿಗಳನ್ನು ಪಾಲಿಸುತ್ತಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾದರಿಯನ್ನು ಮುಂದುವರಿಸುವುದಾಗಿ ಹೇಳಿದರು.
ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ವೇಳೆ ನಡ್ಡಾ ಅವರು ಸಿದ್ದೇಶ್ವರ ಶ್ರೀಗಳು ಕೊನೆಯ ದಿನಗಳನ್ನ ಕಳೆದ, ಮಠದ ಆವರಣದಲ್ಲೇ ಇರುವ ಕೋಣೆಯನ್ನು ಸಂದರ್ಶಿಸಿದರು. ಅವರ ದೇಹಕ್ಕೆ ಅಗ್ನಿಸ್ಪರ್ಷ ಮಾಡಿದ ಸ್ಥಳದ ದರ್ಶನ…ಮಾಡಿದರು.
ಅದಕ್ಕಿಂತ ಮೊದಲು ಅವರು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂದಿರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಮಠದ ಸಂಪ್ರದಾಯದಂತೆ ಮಠದ ಕಿರಿಯ ಶ್ರೀಗಳು ಗುರುನಮನ ಗೀತೆ ಹೇಳಿದರು.
ಜೆ.ಪಿ. ನಡ್ಡಾ ಅವರ ಜತೆಗೆ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಇತರರು ಇದ್ದರು.
ಇದನ್ನೂ ಓದಿ | Karnataka Election | ಇಂದಿನಿಂದ 9 ದಿನ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ವಿಜಯಪುರದಲ್ಲಿ ಜೆ.ಪಿ. ನಡ್ಡಾ ಚಾಲನೆ