ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ದರ (Electricity Bill) ಏರಿಕೆ ವಿರುದ್ಧ ಬಿಜೆಪಿ ಸಿಡಿದೆದ್ದಿದೆ (BJP protest). ಒಂದು ಕಡೆ ಗೃಹ ಜ್ಯೋತಿ ಹೆಸರಿನಲ್ಲಿ ಉಚಿತ ವಿದ್ಯುತ್ (Congress guarantee) ನೀಡಲು ಮುಂದಾಗಿರುವ ಸರ್ಕಾರ ಅದೇ ಹೊತ್ತಿಗೆ ವಿದ್ಯುತ್ ದರ ಏರಿಕೆಯ ಮೂಲಕ ಉಳಿದ ವರ್ಗಕ್ಕೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ಆಕ್ಷೇಪಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸಂಯೋಜಿಸಿದ ಬಿಜೆಪಿ ಕೆಇಬಿ ಸರ್ಕಲ್ ಬಳಿಯ ಮೆಸ್ಕಾಂ ಶಿವಮೊಗ್ಗ ವೃತ್ತ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಕಚೇರಿಗೆ ಮುತ್ತಿಗೆಯನ್ನೂ ಹಾಕಿದೆ. ಈ ವೇಳೆ ಕಟ್ಟದ ಕಿಟಕಿ ಗಾಜನ್ನು ಕೂಡಾ ಒಡೆಯಲಾಗಿದೆ.
ಬಿಜೆಪಿ ಶಿವಮೊಗ್ಗ ನಗರಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯಲು ಯತ್ನಿಸಿದರು. ಆದರೆ, ಬ್ಯಾರಿಕೇಡ್ ದಾಟಿ ಕಚೇರಿ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಒಳ ಪ್ರವೇಶಿಸಲೂ ಯತ್ನಿಸಿದರು.
ಆದರೆ, ಕಚೇರಿ ಬಾಗಿಲಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಯಶಸ್ವಿಯಾದರು. ಈ ವೇಳೆ ಕಚೇರಿ ಗಾಜು ಒಡೆಯಲಾಗಿದೆ.
ಒಂದು ಹಂತದಲ್ಲಿ ಪೊಲೀಸರು ಪ್ರತಿಭಟನಾನಿರತ ಪ್ರಮುಖರನ್ನು ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ದರು. ಅಲ್ಲಿಗೆ ಪ್ರತಿಭಟನೆ ಮುಕ್ತಾಯವಾಯಿತು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಆಗ ಉಳಿದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಮತ್ತೊಂದು ವಾಹನದಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ಯಲಾಯಿತು.
ಪ್ರತಿಭಟನಾಕಾರರ ಬೇಡಿಕೆ ಏನು?
1.ಏಕಾಏಕಿ ಹೆಚ್ಚಿಸಿರುವ ವಿದ್ಯುತ್ ದರವನ್ನು ತಕ್ಷಣವೇ ಇಳಿಸುವಂತೆ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
2. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಅನುಷ್ಠಾನಕ್ಕೆ ಕಂಡಿಷನ್ ಹಾಕುತ್ತಿರುವುದು ಸರಿಯಲ್ಲ. ವರ್ಷದ ಸರಾಸರಿ ಆಧರಿಸಿ, ಗೃಹಜ್ಯೋತಿ ವಿದ್ಯುತ್ ಉಚಿತ ನೀಡೋದು ಬೇಡ, 200 ಯುನಿಟ್ ನೀಡಬೇಕು. ಬಾಡಿಗೆದಾರರಿಗೆ 58 ಯೂನಿಟ್ ಮಿತಿ ಬದಲಾಗಿ, 200 ಯೂನಿಟ್ ನೀಡಬೇಕು. ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯ ಮಾಡಲಾಯಿತು.
3. ವಿದ್ಯುತ್ ದರ ಏರಿಕೆಯಿಂದ ಜನರಿಗೆ ವಂಚನೆ ಮಾಡಿದಂತಾಗಿದೆ. ಉಚಿತ ವಿದ್ಯುತ್ ಯೋಜನೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಕೈಗಾರಿಕೆ, ಉದ್ಯಮ, ವ್ಯಾಪಾರಗಳಿಗೆ ಇದು ದೊಡ್ಡ ಹೊಡೆತ ಎಂದು ಬಿಜೆಪಿ ಆಕ್ಷೇಪಿಸಿದೆ.
ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಮೇಯರ್ ಶಿವಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿ
ಒಂದೇ ಊರಿನ 200ಕ್ಕೂ ಅಧಿಕ ವಿದ್ಯುತ್ ಮೀಟರ್ ಭಸ್ಮ
ಒಂದು ಕಡೆ ಉಚಿತ ವಿದ್ಯುತ್, ವಿದ್ಯುತ್ ದರ ಹೆಚ್ಚಳಕ್ಕೆ ಸಂಬಂಧಿಸಿದ ಚರ್ಚೆ ಮುಂದುವರಿಯುತ್ತಿರುವ ನಡುವೆಯೇ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಊರಿನ ೨೦೦ ಕ್ಕೂ ಹೆಚ್ಚು ವಿದ್ಯುತ್ ಮೀಟರ್ ಸುಟ್ಟು ಭಸ್ಮವಾಗಿದೆ. ಮನೆಯ ವಿದ್ಯುತ್ ಮೀಟರ್ ಜತೆಗೆ ಟಿವಿ, ಫ್ರಿಡ್ಜ್ ಎಲ್ಲವೂ ಸುಟ್ಟು ಕರಕಲಾಗಿದೆ.
ಸುಣಧೋಳಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಮೀಟರ್‌ಗಳು ಸುಟ್ಟಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಆಗಿ ಮೀಟರ್‌ಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾವ ಕಾರಣಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.