ಬೆಂಗಳೂರು: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು, ಬಸವೇಶ್ವರ ನಗರದ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ (BJP Protest) ನಡೆಸಿದರು. ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿಗೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿಸಿ, ಹಿಂಸೆ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿ, ಜಾಮೀನು ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಹೀಗಾಗಿ ಪ್ರತಿಭಟನೆ ನಿಯಂತ್ರಿಸಲು ಪುನೀತ್ ಕೆರೆಹಳ್ಳಿಯನ್ನು ಬಸವೇಶ್ವರನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜು.26ರಂದು ರಾತ್ರಿ ಅಕ್ರಮವಾಗಿ ಮಾಂಸ ಬರುತ್ತಿದೆ ಎಂಬ ಮಾಹಿತಿ ಇತ್ತು. ಈ ಹಿಂದೆ ಎಲ್ಲರಿಗೂ ದೂರು ನೀಡಿದೂ ಪ್ರಯೋಜನೆ ಆಗಿರಲಿಲ್ಲ. ಹೀಗಾಗಿ ಪುನೀತ್ ಕೆರೆಹಳ್ಳಿ ಸ್ಥಳಕ್ಕೆ ಹೋಗಿದ್ದರು. ಆಗ ಅಬ್ದುಲ್ ರಜಾಕ್ ಸ್ಥಳಕ್ಕೆ ಬಂದಿದ್ದಾರೆ. ಮಾಂಸದ ಬಾಕ್ಸ್ ಓಪನ್ ಮಾಡಲು ಅಬ್ದುಲ್ ರಜಾಕ್ ಒಪ್ಪಿಲ್ಲ. ಸ್ಥಳಕ್ಕೆ ಪೊಲೀದರು ಬಂದು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು, ಕಾಟನ್ ಪೇಟೆ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ. ಪುನೀತ್ ಅಲ್ಲಿಗೆ ಹೋಗಿದ್ದು ತಪ್ಪಾ ಎಂದು ಪ್ರಶ್ನಿಸಿದರು.
ಮಾಂಸ ತಂದ ಅಬ್ದುಲ್ ರಜಾಕ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಕ್ಕೆ ಹೋದ ಕೆರೆಹಳ್ಳಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಕಾನೂನಿನಲ್ಲಿ ಯಾವುದೇ ವ್ಯಕ್ತಿಗೆ ಟಾರ್ಚರ್ ಮಾಡೋಕ್ಕೆ ಅವಕಾಶ ಇಲ್ಲ. ಹೀಗಿರುವಾಗ ಯಾಕೆ ಬಟ್ಟೆ ಬಿಚ್ಚಿಸಿದರು?, ಅಬ್ದುಲ್ ರಜಾಕ್ ವಿರುದ್ಧ ಕೇಸ್ ದಾಖಲು ಮಾಡಬೇಕು. ಎಸಿಪಿ ಚಂದನ್ ವಿರುದ್ಧ ತನಿಖೆ ನಡೆಸಬೇಕು. ನಾನು ಯಾರಿಗೂ ವಾರ್ನಿಂಗ್ ಮಾಡಿಲ್ಲ. ಪೊಲೀಸ್ ಕಮಿಷನರ್‌ಗೆ ದೂರು ನೀಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಈ ವೇಳೆ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಾಯಿ ಮಾಂಸ ಮಾರಾಟ ದಂಧೆ ವಿಚಾರದಲ್ಲಿ ಗೃಹಮಂತ್ರಿಗಳು ಹೇಳಿದ್ದು ಸುಳ್ಳು , ಈ ಹಿಂದೆ ಪ್ರಿಯಾಂಕ್ ಖರ್ಗೆ ಕೂಡ ಸುಳ್ಳು ಹೇಳಿದ್ದರು. ಸಾಬೀತಾಗೋಕೆ ಮುಂಚೆಯೇ ಇವರೇ ದೃಢಪಡಿಸುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಸಂಚು. ನ್ಯಾಯ ಕೇಳೋಕೆ ಬಂದ ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಗೂಂಡಾಗಳಂತೆ ಬಳಸಿಕೊಳ್ಳುತ್ತಿದೆ. ಪ್ರಕರಣ ಬೆಳಕಿಗೆ ತಂದವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಂಸ ಯಾವುದು ಅನ್ನೋ ರಿಪೋರ್ಟ್ ಇನ್ನೂ ಬಂದಿಲ್ಲ, ಆಗಲೇ ಹೇಗೆ ನೀವು ಅದು ಮೇಕೆ ಮಾಂಸ ಎನ್ನುತ್ತೀರಿ? ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು
ಎಸಿಪಿ ಚಂದನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬೇದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಮ್ ಆದ್ಮಿ ಪಾರ್ಟಿ ಯುವ ಘಟಕದಿಂದ ಪಶ್ಚಿಮ ಡಿಸಿಪಿಗೆ ದೂರು ನೀಡಲಾಗಿದೆ. ಪುನೀತ್ ಕೆರೆಹಳ್ಳಿ ಬಂಧನಕ್ಕೆ ಸಂಬಂಧಿಸಿ ಪ್ರತಾಪ್ ಸಿಂಹ ಟ್ವೀಟ್ ಮಾಡಿ, ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಯುವ ಘಟಕ ಅಧ್ಯಕ್ಷ ಲೋಹಿತ್ ಕುಮಾರ್ ದೂರು ನೀಡಿದ್ದಾರೆ.
ಜು. 30ರಂದು ಟ್ವೀಟ್ ಮಾಡಿದ್ದ ಪ್ರತಾಪ್ ಸಿಂಹ ಅವರು, “ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ಎಸಿಪಿ ಚಂದನ್, ಜು.31ಕ್ಕೆ ಸ್ಟೇಷನ್‌ಗೆ ಬರುತ್ತೇನೆ, ನೀವು ಇರಬೇಕು. ಬೆಳಗ್ಗೆ ಬಸವೇಶ್ವರನಗರ ಎಸಿಪಿ ಆಫೀಸ್ ಎದುರು 10 ಗಂಟೆಗೆ ಬನ್ನಿ” ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಯ ಫೋಟೋ ಹಾಕಿ ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದನ ವಿರುದ್ಧ ಎಎಪಿ ದೂರು ನೀಡಿದೆ.