ನವ ದೆಹಲಿ: ವಾಲ್ಮೀಕಿ ನಿಗಮ ಅಕ್ರಮ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಆವರಣದಲ್ಲಿ ರಾಜ್ಯದ ಬಿಜೆಪಿ ಸಂಸದರು ಶುಕ್ರವಾರ ಪ್ರತಿಭಟನೆ (BJP Protest) ನಡೆಸಿದರು.
ನೂತನ ಸಂಸತ್ ಭವನದ ಮಕರ ದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಯಧುವೀರ್ ಒಡೆಯರ್, ಡಾ. ಮಂಜುನಾಥ್, ಕ್ಯಾ. ಬ್ರಿಜೇಶ್ ಚೌಟಾ, ರಮೇಶ್ ಜಿಗಜಿಣಗಿ, ಪಿಸಿ ಗದ್ದಿಗೌಡರ್, ಜೆಡಿಎಸ್ ಸಂಸದ ಮಲ್ಲೇಶ್ ಬಾಬು, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಈರಣ್ಣ ಕಡಾಡಿ, ನಾರಾಯಣ ಸಾ ಭಾಂಡಗೆ, ಲೆಹರ್ ಸಿಂಗ್ ಸೇರಿ ಹಲವರು ಭಾಗಿಯಾಗಿದ್ದರು.
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ವಾಲ್ಮೀಕಿ ಹಗರಣ
ರಾಜ್ಯಸಭೆಯಲ್ಲೂ ವಾಲ್ಮೀಕಿ ಹಗರಣ ಪ್ರತಿಧ್ವನಿಸಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ವಿಚಾರವಾಗಿ ಮಾತನಾಡಲು ನಮಗೂ ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದಿದ್ದಾರೆ.
ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದೆ ಎಂದು ಕಡಾಡಿ ಕಿಡಿಕಾರಿದರು. ಕರ್ನಾಟಕದ ಅಭಿವೃದ್ಧಿ ಇಟ್ಟ ಹಣವನ್ನು ಹಾಡ ಹಗಲೇ ಲೂಟಿ ಮಾಡಿದ್ದಾರೆ. 187 ಕೋಟಿ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡಲು ಕಾಂಗ್ರೆಸ್ ಹೊರಟಿದೆ. ಹಾಗಾಗಿ ಈ ಸದನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಡಾಡಿ ಆಗ್ರಹಿಸಿದರು. ಈ ವೇಳೆ ಆಸನದದಿಂದ ಎದ್ದು ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಿತ್ಯ ಒಂದು ಅವ್ಯವಹಾರ ಹೊರ ಬರುತ್ತಿದೆ: ಈರಣ್ಣ ಕಡಾಡಿ
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ನಿತ್ಯ ಒಂದು ಅವ್ಯವಹಾರ ಹೊರ ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬೇರೆ ಬೇರೆ ಇಲಾಖೆ ಹಣ ಬಳಕೆಯಾಗಿದೆ. ವಾಲ್ಮೀಕಿ ನಿಗಮ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಶೋಷಿತ ಜನಾಂಗದ ಹಣವನ್ನು ಚುನಾವಣೆ ಬಳಕೆಗೆ ಬಳಸಿದೆ. ಮುಡಾದಲ್ಲಿ ಸಿಎಂ ಕುಟುಂಬಸ್ಥರಿಂದ ಅಕ್ರಮವಾಗಿದೆ. ಶೋಷಿತರ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅವರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ
ಹಣ ದುರುಪಯೋಗ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಿದ್ಧವಿಲ್ಲ. ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಚರ್ಚೆ ಆಗದಂತೆ ನೋಡಿಕೊಂಡಿದೆ. ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ. ಎಐಸಿಸಿಗೂ ಕರ್ನಾಟಕದಿಂದ ಹಣ ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ, ಇದರಿಂದ ಹೊರ ಬರಲು ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.