Site icon Vistara News

BJP Protest: ಕೋಲಾರ ಸಂಸದ ಮುನಿಸ್ವಾಮಿ ಜತೆ ಅನುಚಿತ ವರ್ತನೆಗೆ ಆಕ್ರೋಶ; ಶಾಸಕ, ಎಸ್‌ಪಿ ವಿರುದ್ಧ ಬಿಜೆಪಿ ಪ್ರತಿಭಟನೆ

BJP Workers Protest

ಕೋಲಾರ: ಜನತಾ ದರ್ಶನ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಅವರ ಜತೆ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್ ಅನುಚಿತ ವರ್ತನೆ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ (BJP Protest) ನಡೆಸಿದರು.

ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ಸಂಸದರನ್ನು ಹಿಡಿದು ಎಳೆದಾಡಿದ ಜಿಲ್ಲಾ ಎಸ್ಪಿ ನಾರಾಯಣ್ ವರ್ತನೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಪೋಲಿಸ್ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಯಕರ್ತರು ಆರೋಪಿಸಿದರು.

ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ‌ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್

ಚಿಂತಾಮಣಿ, ಶಿಡ್ಲಘಟ್ಟದಲ್ಲೂ ಅಕ್ರೋಶ

ಚಿಂತಾಮಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಬಳ್ಳಾಪುರ‌: ಸಂಸದ ಎಸ್. ಮುನಿಸ್ವಾಮಿ ಅವರೊಂದಿಗೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ನಾರಾಯಣ್ ಅನುಚಿತ ವರ್ತನೆಗೆ ವಿರೋಧಿಸಿ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಂತಾಮಣಿಯಲ್ಲಿ ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ಕಾರ್ಯಕರ್ತರು, ಎಸ್‌ಪಿ ನಾರಾಯಣ್ ಹಾಗು ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಶಿಡ್ಲಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹಾಗೆಯೇ ಶಿಡ್ಲಘಟ್ಟದಲ್ಲೂ ಬಿಜೆಪಿ ಮುಖಂಡ ರಾಮಚಂದ್ರೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ನಾರಾಯಣ್ ವಿರುದ್ಧ ತಹಸೀಲ್ದಾರ್‌ ಹಾಗೂ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಸ್ಪೀಕರ್, ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದ ಸಂಸದ

ಕೋಲಾರ: ಅನುಚಿತ ವರ್ತನೆ ತೋರಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್ ಅವರ ಮೇಲೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಎಸ್‌ಪಿ ಕಾಂಗ್ರೇಸ್ ಏಜೆಂಟರಂತೆ ವರ್ತಿಸುತ್ತಿದ್ದು, ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗುವುದು‌ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಎಸ್.ಎನ್.ನಾರಾಯಣಸ್ವಾಮಿ ಅವರು ನನಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಕೋಲಾರದಲ್ಲಿ 15 ಕೊಲೆ ನಡೆದಿದ್ದು, ವೇಶ್ಯಾವಾಟಿಕೆ, ಜೂಜು, ಬೆಟ್ಟಿಂಗ್ ದಂಧೆ ಜೋರಾಗಿದೆ. ಅವ್ಯಾಚ್ಯ ಶಬ್ದಗಳಿಂದ ಬೈದವರನ್ನು ಬಿಟ್ಟು, ಕಾಂಗ್ರೆಸ್‌ನವರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ಎಸ್‌ಪಿ ನನ್ನನ್ನು ಹೊರಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಏಜೆಂಟ್‌ನಂತಿರುವ ಎಸ್‌ಪಿ ನಾರಾಯಣ್ ನಮ್ಮ ಜಿಲ್ಲೆಗೆ ಬೇಕಾಗಿಲ್ಲ ಎಂದು ಕಿಡಿಕಾರಿದರು.

ಚುನಾವಣೆಗೆ ಬರಬಾರದೆಂದು ಅಂಬೇಡ್ಕರ್ ಅವರನ್ನು ಆಗ ಕಾಂಗ್ರೆಸ್‌ ಪಿತೂರಿ ಮಾಡಿ ತುಳಿಯಿತು. ಹಾಗೆಯೇ ಕೋಲಾರದಲ್ಲಿ ನನ್ನ ವಿರುದ್ಧ ಪಿತೂರಿ ಮಾಡಲು ಮುಂದಾಗಿದ್ದಾರೆ. ದಲಿತ ಸಂಸದರಾದ ನನಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ

ಏನಿದು ಘಟನೆ?

ಕೋಲಾರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್.ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆಯಿತು. ವೇದಿಕೆ ಮೇಲೆಯೇ ಏಕವಚನದಲ್ಲಿ ಜನಪ್ರತಿನಿಧಿಗಳು ನಿಂದಿಸಿಕೊಂಡರು.

ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜನತಾ ದರ್ಶನದಲ್ಲಿ ಮೊದಲಿಗೆ ಸಂಸದ ಎಸ್.ಮುನಿಸ್ವಾಮಿ ಅವರು ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಾ ಎಂದು ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಕೆರಳಿದ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ಅವರು, ಯಾರು ಭೂಗಳ್ಳ, ನಿಮ್ಮಪ್ಪ ಭೂಗಳ್ಳ, ಯಾರಿಗೆ ಹೇಳ್ತಿಯಾ? ನಿಮ್ಮಪ್ಪನಿಗೆ ಹುಟ್ಟಿದ್ದರೆ ಸಾಬೀತು ಮಾಡು ಎಂದು ಸಂಸದ ಎಸ್‌. ಮುನಿಸ್ವಾಮಿ ಅವರಿಗೆ ಏಕವಚನದಲ್ಲಿಯೇ ಸವಾಲು ಹಾಕಿದರು. ಇದರಿಂದ ಸಂಸದ ಹಾಗೂ ಶಾಸಕನ ನಡುವಿನ ಗಲಾಟೆ ತಾರಕಕ್ಕೇರಿತು.

ಜಿಲ್ಲಾ‌ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಮ್ಮುಖದಲ್ಲಿ ಗಲಾಟೆ ಜೋರಾಗಿದ್ದರಿಂದ ಎಸ್‌ಪಿ ನಾರಾಯಣ್‌ ಅವರು ಸಂಸದ ಮುನಿಸ್ವಾಮಿ ಅವರನ್ನು ತಡೆದು ಹೊರಗೆ ಕಳುಹಿಸಿದರು. ಇಬ್ಬರು ಜನಪ್ರತಿನಿಧಿಗಳನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸಪಟ್ಟರು.

Exit mobile version